(ನ್ಯೂಸ್ ಕಡಬ) newskadaba.com ಮಾ. 01 ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ದೂರಾಗಿಸಲು ಸುರಂಗ ಮಾರ್ಗವೊಂದೇ ಪರಿಹಾರ ಎಂದು ರಾಜ್ಯ ಸರ್ಕಾರ ಶುಕ್ರವಾರ ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇಂಧನ ಇಲಾಖೆ ಸಚಿವ ಹಾಗೂ ಬೆಂಗಳೂರು ಅಭಿವೃದ್ಧಿ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರು, ಹೆಬ್ಬಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಪ್ರತಿನಿತ್ಯ ನಾಗರಿಕರು ಪರದಾಡುತ್ತಿದ್ದಾರೆ. ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ಪ್ರಸ್ತಾಪಿಸಿರುವ ಸುರಂಗ ಮಾರ್ಗದ ಯೋಜನೆ ಕೆಟ್ಟದ್ದಲ್ಲ, ಹೆಬ್ಬಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಇದು ಕಡಿಮೆ ಮಾಡುತ್ತದೆ ಮಾಡುತ್ತದೆ ಎಂದು ಹೇಳಿದರು.
ಜಯದೇವ ಮೇಲ್ಸೇತುವೆ ಕೆಡವಿರುವುದನ್ನು ಟೀಕಿಸಲಾಗಿತ್ತು. ಆದರೆ ಮೆಟ್ರೋ ಮಾರ್ಗದಿಂದ ಲಾಭವಾಗಲಿದೆ. ಈ ಹಿಂದೆ ಡಬಲ್ ಡೆಕ್ಕರ್ ಮೇಲ್ಸೇತುವೆ ಕಲ್ಪನೆಯನ್ನು ವಿರೋಧಿಸಿದ ಜನರು ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಪ್ರಯೋಜನ ಪಡೆಯುತ್ತಿದ್ದಾರೆ. ಶಿವಾನಂದ ವೃತ್ತದಲ್ಲಿನ ಉಕ್ಕಿನ ಮೇಲ್ಸೇತುವೆಯಿಂದ ಜನರಿಗೆ ಮತ್ತು ತಜ್ಞರಿಗೆ ಯಾವುದೇ ಸಮಸ್ಯೆಗಳಾಗಿರಲಿಲ್ಲ. ಆದರೆ, ಹೆಬ್ಬಾಳದವರೆಗೆ ಮುಂದುವರೆಸುವ ಕುರಿತು ಟೀಕಿಸಿದ್ದರು ಎಂದು ತಿಳಿಸಿದರು. ಇದೇ ವೇಳೆ ಶಿವಾನಂದ ಮೇಲ್ಸೇತುವೆ ಮತ್ತು ನೆಹರು ವೃತ್ತದಲ್ಲಿ ಟ್ರಾಫಿಕ್ ಜಾಮ್ ಕುರಿತು ಮಾಧ್ಯಮಗಳು ಮತ್ತು ಪ್ರಯಾಣಿಕರ ಟೀಕೆಗಳ ಕುರಿತ ಪ್ರಶ್ನೆಗೆ ಉತ್ತರಿಸಿ, ಹೆಚ್ಚು ಸಂಚಾರ ದಟ್ಟಣೆ ಇರುವ ಕಡೆಗೆ ಹೋಗುವ ಜನರು, ಅಲ್ಲಿ ಕೈಗೊಳ್ಳಲಾಗಿರುವ ಪರಿಹಾರ ಮಾರ್ಗಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಹೆಬ್ಬಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಟ್ರಾಫಿಕ್ ಸಮಸ್ಯೆಗೆ ಸುರಂಗ ಮಾರ್ಗ ನಿರ್ಮಾಣವೊಂದೇ ಪರಿಹಾರವಾಗಿದೆ ಎಂದು ಹೇಳಿದರು.