(ನ್ಯೂಸ್ ಕಡಬ) newskadaba.com ಫೆ. 28 ಬೆಂಗಳೂರು: ರಾಜ್ಯ ಬಜೆಟ್ ಮೇಲಿನ ಚರ್ಚೆಗೆ ಕೇವಲ 15 ದಿನಗಳನ್ನು ನಿಗದಿಪಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ತೀವ್ರವಾಗಿ ವಾಗ್ದಾಳಿ ನಡೆಸಿವೆ.
ವಿವಿಧ ಇಲಾಖೆಗಳ ಸಮಗ್ರ ಬೇಡಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಸೂಕ್ಷ್ಮವಾದ ಚರ್ಚೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಮಾರ್ಚ್ ಮೂರರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮಾರ್ಚ್ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ.
ಅಧಿವೇಶನದ ಮೊದಲ ದಿನ ಮಾರ್ಚ್ 3ರಂದು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ರಾಜ್ಯಪಾಲರ ಭಾಷಣದ ಮೇಲೆ ಸದನದಲ್ಲಿ ಮೂರು ದಿನ ಚರ್ಚೆ ನಡೆಯಲಿದೆ. ನಂತರ ಮಾರ್ಚ್ 7 ರಂದು ವಿಧಾನಸಭೆಯಲ್ಲಿ ಈ ಸಾಲಿನ ಬಜೆಟ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡನೆ ಮಾಡಲಿದ್ದಾರೆ. ಶನಿವಾರ ಹಾಗೂ ಭಾನುವಾರ ಹೊರತು ಪಡಿಸಿ 14 ದಿನ ಬಜೆಟ್ ಅಧಿವೇಶನದ ಕಲಾಪಗಳು ನಡೆಯಲಿವೆ. ಬಜೆಟ್ ಮೇಲಿನ ಚರ್ಚೆಗೆ ಕೇವಲ 14 ದಿನಗಳ ಮಾತ್ರ ಉಳಿಯಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಕಿಡಿಕಾರಿದೆ.