(ನ್ಯೂಸ್ ಕಡಬ) newskadaba.com ಕಡಬ, ಫೆ.05. ಅಮೆರಿಕದಿಂದ ಗಡಿಪಾರುಗೊಂಡ 104 ಭಾರತೀಯ ಪ್ರಜೆಗಳು ಇಂದು ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಈ 104 ಭಾರತೀಯರನ್ನ ಹೊತ್ತ ಅಮೆರಿಕದ ಮಿಲಿಟರಿ C-17 ವಿಮಾನವು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಮೃತಸರ ವಿಮಾನ ನಿಲ್ದಾಣ ತಲುಪಿದೆ. ಫೆ.4ರ ಮಧ್ಯಾಹ್ನ ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಿಂದ ಈ ವಿಮಾನವು ಹೊರಟಿದೆ. ಈ ವಿಮಾನದಲ್ಲಿ 11 ಸಿಬ್ಬಂದಿ ಮತ್ತು 45 ಅಮೆರಿಕದ ಅಧಿಕಾರಿಗಳು ಕೂಡ ಇದ್ದರು. ಗುಜರಾತ್ ಮತ್ತು ಹರಿಯಾಣ ಮೂಲದವರು ತಲಾ 33 ಜನರಿದ್ದಾರೆ. 30 ಜನರು ಪಂಜಾಬ್, ತಲಾ ಇಬ್ಬರು ಪ್ರಯಾಣಿಕರು ಉತ್ತರ ಪ್ರದೇಶ ಮತ್ತು ಚಂಡೀಗಢದವರು, ಮೂವರು ಮಹಾರಾಷ್ಟ್ರ ಮೂಲದವರು ಎಂದು ಮೂಲಗಳಿಂದ ತಿಳಿದು ಬಂದಿದೆ.
ಇದರಲ್ಲಿ 25 ಮಹಿಳೆಯರು ಮತ್ತು 12 ಅಪ್ರಾಪ್ತ ವಯಸ್ಕರು ಸೇರಿದ್ದಾರೆ. 48 ಮಂದಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇದ್ದಾರೆ ಎಂದು ಹೇಳಲಾಗಿದೆ. ಪಂಜಾಬ್‌ನ 30 ಜನರಲ್ಲಿ ಹೆಚ್ಚಿನವರು ಗುರುದಾಸ್ಪುರ್, ಅಮೃತಸರ ಮತ್ತು ತರಣ್ ಸೇರಿದಂತೆ ಗಾಝಾ ಪಟ್ಟಿಯಿಂದ ಬಂದವರು, ಇತರರು ಜಲಂಧರ್, ನವನ್‌ಶಹರ್, ಪಟಿಯಾಲ, ಮೊಹಾಲಿ ಮತ್ತು ಸಂಗ್ರೂರ್‌ನವರು. ಬಹುತೇಕ ಮಂದಿ ವೀಸಾ ಅವಧಿ ಅಂತ್ಯವಾದ ಬಳಿಕವೂ ಅಕ್ರಮವಾಗಿ ನೆಲೆಸಿದ್ದರು ಎಂದು ಪಂಜಾಬ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಪಂಜಾಬ್ ಡಿಜಿಪಿ, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಾವು ಇದರ ಬಗ್ಗೆ ಚರ್ಚಿಸಿದ್ದೇವೆ. ಪಂಜಾಬ್ ಸರ್ಕಾರ ಅವರನ್ನು ಸ್ನೇಹಪರ ರೀತಿಯಲ್ಲಿ ಸ್ವೀಕರಿಸಬೇಕೆಂದು ಅವರು ನಮ್ಮನ್ನು ಕೇಳಿಕೊಂಡಿದ್ದಾರೆ. ಇದಕ್ಕಾಗಿ ವಿಮಾನ ನಿಲ್ದಾಣದಲ್ಲಿ ನಮ್ಮ ಕೌಂಟರ್‌ಗಳನ್ನು ಸ್ಥಾಪಿಸಿದ್ದೇವೆ. ನಾವು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ನಮಗೆ ಯಾವುದೇ ಹೆಚ್ಚಿನ ಮಾಹಿತಿ ಸಿಕ್ಕಾಗಲೆಲ್ಲಾ ನಾವು ಅದನ್ನು ಹಂಚಿಕೊಳ್ಳುತ್ತೇವೆ. ಹೆಚ್ಚಿನ ಸಂಖ್ಯೆಯ ಜನರನ್ನು ಗಡಿಪಾರು ಮಾಡುವ ಸಾಧ್ಯತೆಯಿದೆ ಎಂಬ ದೃಢೀಕರಿಸದ ವರದಿಗಳು ಇನ್ನೂ ನಮ್ಮಲ್ಲಿವೆ ಎಂದಿದ್ದಾರೆ.