(ನ್ಯೂಸ್ ಕಡಬ) newskadaba.com ಕಡಬ, ಫೆ.05. ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಈ ವರೆಗೂ ಶೇ.8.10ರಷ್ಟು ಮತದಾನವಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿಂದು 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬೆಳ್ಳಂಬೆಳಗ್ಗೆ ಕೊರೆವ ಚಳಿಯನ್ನೂ ಲೆಕ್ಕಿಸದೇ ಮತದಾರರು ಉತ್ಸಾಹದಿಂದಲೇ ಹಕ್ಕು ಚಲಾಯಿಸುತ್ತಿದ್ದಾರೆ. ಅಂತೆಯೇ ಲೋಕಸಭೆ ವಿಪಕ್ಷ ನಾಯಕರೂ ಆಗಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ದೆಹಲಿ ಮುಖ್ಯಮಂತ್ರಿ ಆತಿಶಿ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಇದರಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್, ಆಪ್ ನಾಯಕ ಮನೀಶ್ ಸಿಸೋಡಿಯಾ, ಸೇರಿದಂತೆ ಅನೇಕ ನಾಯಕರು ಮತ ಚಲಾಯಿಸಿದ್ದಾರೆ. ದೆಹಲಿಯಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಸಂಜೆ 6:30 ಗಂಟೆವರೆಗೂ ನಡೆಯಲಿದೆ. 1.56 ಕೋಟಿ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಒಟ್ಟು 699 ಅಭ್ಯರ್ಥಿಗಳು ಕಣದಲ್ಲಿದ್ದು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಫೆಬ್ರವರಿ 8ಕ್ಕೆ ಫಲಿತಾಂಶ ಹೊರಬೀಳಲಿದೆ.
ಸತತ 10 ವರ್ಷಗಳಿಂದ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಕನಸಿನಲ್ಲಿದ್ದರೆ, 27 ವರ್ಷಗಳ ಬಳಿಕ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿ ಬಿಜೆಪಿ ಹಾಗೂ 10 ವರ್ಷಗಳ ಬಳಿಕ ಅಧಿಕಾರದ ಗುರಿಯಲ್ಲಿ ಕಾಂಗ್ರೆಸ್ ಇದೆ.