(ನ್ಯೂಸ್ ಕಡಬ) newskadaba.com, ಫೆ.04 ಬೆಂಗಳೂರು: 2014 ರಿಂದ ಕರ್ನಾಟಕದಾದ್ಯಂತ 1,652 ಕಿಮೀ ಹೊಸ ರೈಲು ಹಳಿಗಳನ್ನು ಹಾಕಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ಹೇಳಿದ್ದಾರೆ. ಇಡೀ ಶ್ರೀಲಂಕಾದ ರೈಲು ಮಾರ್ಗದ ವಿಸ್ತೀರ್ಣದಷ್ಟು ರೈಲ್ವೆ ಮಾರ್ಗ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಅವಧಿಯಲ್ಲಿ ಆಗಿದೆ ಎಂದರು.
ಸೋಮವಾರ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್ನಲ್ಲಿ ಕರ್ನಾಟಕ ರೈಲ್ವೆಗೆ ನೀಡಿರುವ ಕೊಡುಗೆಗಳ ಕುರಿತು ಮಾಹಿತಿ ನೀಡಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷ 15 ಕಿಮೀ ಮಾತ್ರ ವಿದ್ಯುದ್ದಿಕರಣ ಕಾಮಗಾರಿ ನಡೆಯುತ್ತಿತ್ತು. ಈಗಿನ ಅವಧಿಯಲ್ಲಿ ಪ್ರತಿ ವರ್ಷ 300 ಕಿಮೀಗೂ ಹೆಚ್ಚು ವಿದ್ಯುದೀಕರಣ ಮಾಡಲಾಗುತ್ತಿದೆ. 2014ರ ನಂತರ ಕರ್ನಾಟಕದಲ್ಲಿ 1,652 ಕಿಮೀ ಹೊಸ ರೈಲ್ವೆ ಮಾರ್ಗಗಳನ್ನು ಅಳವಡಿಸಲಾಗಿದೆ ಎಂದರು.
61 ರೈಲ್ವೆ ನಿಲ್ದಾಣಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಜೊತೆಗೆ, ಹೊಸ ಮಾರ್ಗಗಳು, ಡಬ್ಲಿಂಗ್, ಗೇಜ್ ಪರಿವರ್ತನೆ, ಕಾರ್ಯಾಗಾರಗಳ ಉನ್ನತೀಕರಣಕ್ಕಾಗಿ ಕರ್ನಾಟಕಕ್ಕೆ 51,479 ಕೋಟಿ ರೂ.ಹೂಡಿಕೆ ಬಂದಿದೆ. 10 ವಂದೇ ಭಾರತ್ ರೈಲುಗಳು ಕರ್ನಾಟಕದಲ್ಲಿ ಸಂಚರಿಸುತ್ತಿವೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು