(ನ್ಯೂಸ್ ಕಡಬ) newskadaba.com ಜ.27 : ಗಂಡಾನೆಯ ಮೃತದೇಹವೊಂದು ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಮತ್ತು ಕೇರಳ ಗಡಿ ಭಾಗದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಎರ್ಕಲ್ಪಾಡಿಯಲ್ಲಿ ಭಾನುವಾರ ನಡೆದಿದೆ. ಮಂಡೆಕೋಲು ರಿಸರ್ವ್ ಫಾರೆಸ್ಟ್‌ನಲ್ಲಿ ಸ್ಥಳೀಯರಿಗೆ ಸುಮಾರು 50-55 ವರ್ಷ ಪ್ರಾಯದ ಕಾಡಾನೆ ಮೃತದೇಹ ಕಂಡುಬಂದಿದ್ದು, ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕಾದಾಟದಲ್ಲಿ ಸಾವು ಶಂಕೆಮೃತ ಆನೆ ಹಾಗೂ ಬೇರೆ ಕಾಡಾನೆಗಳ ನಡುವೆ ಕಾದಾಟ ನಡೆದು ಇದರಿಂದ ತೀವ್ರ ರಕ್ತಸ್ರಾವಗೊಂಡು ಆನೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಆನೆಯ ದೇಹದಲ್ಲಿ ತಿವಿದು, ಗಾಯಗೊಂಡು ರಕ್ತಸ್ರಾವವಾಗಿರುವ ಗುರುತು ಕಂಡುಬಂದಿದೆ. ಅರಣ್ಯ ಭಾಗದ ಬೇರೆ ಕಡೆಯಲ್ಲಿ ಕಾದಾಟ ನಡೆದಿದ್ದು, ಇಲ್ಲಿ ಬಂದು ಮೃತಪಟ್ಟಿರಬಹುದು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಸುಳ್ಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಂಜುನಾಥ್ ಎನ್. ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿ ಭೇಟಿ ನೀಡಿದ್ದಾರೆ. ರಾತ್ರಿ ವೇಳೆಗೆ ಸುಳ್ಯ ಪಶುವೈದ್ಯಾಧಿಕಾರಿ ಡಾ| ನಿತಿನ್ ಪ್ರಭು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.