(ನ್ಯೂಸ್ ಕಡಬ) newskadaba.com ಜ.25 ಬೆಂಗಳೂರು: ಬಿಗ್‌ಬಾಸ್ ರಿಯಾಲಿಟಿ ಶೋ ಖ್ಯಾತಿಯ ವಕೀಲ ಜಗದೀಶ್ ಬಂಧನವಾಗಿದೆ. ತೇಜಸ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಜಗದೀಶ್ ಅವರನ್ನು ಬಂಧಿಸಿದ್ದಾರೆ. ಶುಕ್ರವಾರ ನಡೆದ ಗಲಾಟೆಯಲ್ಲಿ ಜಗದೀಶ್ ಅವರ ಗನ್‌ಮ್ಯಾನ್ ಕಾನೂನುಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಉತ್ತರ ಪ್ರದೇಶದಲ್ಲಿ ಮಾತ್ರ ಗುಂಡು ಹಾರಿಸಿರುವ ಬಂದೂಕಿನ ಪರವಾನಿಗೆ ಪಡೆಯಲಾಗಿತ್ತು. ಇದೇ ಗನ್ ಬಳಸಿ ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು. ಈ ಸಂಬಂಧ ತೇಜಸ್ ಎಂಬವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇತ್ತೀಚೆಗೆ ಜಗದೀಶ್ ಮೇಲೆ ಕೆಲವರು ಹಲ್ಲೆ ನಡೆಸಿರುವ ವಿಡಿಯೋ ಸಹ ವೈರಲ್ ಆಗಿತ್ತು. ಶುಕ್ರವಾರವಷ್ಟೇ ಅಣ್ಣಮ್ಮ ತಾಯಿ ಕೂರಿಸುವ ವಿಚಾರಕ್ಕೂ ಗಲಾಟೆ ನಡೆದಿತ್ತು. ಹಲ್ಲೆಯಿಂದ ವಕೀಲ್ ಜಗದೀಶ್ ಮೂಗಿಗೆ ಗಂಭೀರ ಗಾಯವಾಗಿತ್ತು. ಇದಕ್ಕೂ ಮೊದಲು ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿಯ ಭದ್ರತಾ ಸಿಬ್ಬಂದಿ ಜೊತೆ ಲಾಯರ್ ಜಗದೀಶ್ ಕಿರಿಕ್ ಮಾಡಿಕೊಂಡಿದ್ದರು. ಭದ್ರತಾ ಸಿಬ್ಬಂದಿ ಮೇಲೆ ಜಗದೀಶ್ ಹಲ್ಲೆಗೆ ಮುಂದಾಗಿರುವ ದೃಶ್ಯಗಳು ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿತ್ತು. ಇದೀಗ ಲಾಯರ್ ಜಗದೀಶ್ ಬಂಧನವಾಗಿದೆ.
ಲಾಯರ್ ಜಗದೀಶ್ ಸೇರಿದಂತೆ ಒಟ್ಟು ನಾಲ್ಕು ಜನರ ಬಂಧನವಾಗಿದೆ. ಜಗದೀಶ್, ಜಗದೀಶ್ ಮಗ, ಹಾಗೂ ಇಬ್ಬರು ಗನ್ ಮ್ಯಾನ್ ಗಳ ಬಂಧನವಾಗಿದೆ. ಗುಂಡು ಹಾರಿಸಿದ ಗನ್‌ಗಳಿಗೆ ಲೈಸೆನ್ಸ್ ಹೊಂದಿರುವ ಬಗ್ಗೆ ಲಾಯರ್ ಜಗದೀಶ್ ಪೊಲೀಸರಿಗೆ ಸ್ಪಷ್ಟನೆ ನೀಡಿದ್ದಾರೆ.