(ನ್ಯೂಸ್ ಕಡಬ) newskadaba.com ಜ.24 : ಜಲಗಾಂವ್ ರೈಲು ಅಪಘಾತಕ್ಕೆ ಟೀ ಮಾರುವವನೇ ಕಾರಣ, ಆತನಿಂದಲೇ 13 ಮಂದಿ ಬಲಿಯಾಗಿದ್ದಾರೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ರೈಲು ದುರಂತ ಸಂಭವಿಸಿ 13 ಮಂದಿ ಮೃತಪಟ್ಟು 15 ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪುಣೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟೀ ಮಾರುವವನಿಂದಲೇ ಜಲಗಾಂವ್ ರೈಲು ದುರಂತ ಸಂಭವಿಸಿದೆ. ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ಯಾಂಟ್ರಿಯಿಂದ ಬಂದ ಟೀ ಮಾರುವವನೊಬ್ಬ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿರುವುದಾಗಿ ಕೂಗಿದ್ದಾನೆ. ಇದನ್ನು ಕೇಳಿಸಿಕೊಂಡ ಉತ್ತರ ಪ್ರದೇಶದ ಶ್ರಾವಸ್ತಿಯ ಮೂಲದ ಇಬ್ಬರು ಅಲ್ಲಿದ್ದ ಇತರರಿಗೂ ತಿಳಿಸಿದ್ದಾರೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ತಮ್ಮ ರಕ್ಷಣೆಗಾಗಿ ರೈಲಿನ ಅಲಾರಾಂ ಚೈನ್‌ನ್ನು ಎಳೆದು ರೈಲನ್ನು ನಿಲ್ಲಿಸಿದ್ದಾರೆ ಎಂದರು.
ಬಳಿಕ ರೈಲಿನಿಂದ ಇಳಿದ ಪ್ರಯಾಣಿಕರು ಪಕ್ಕದ ರೈಲು ಹಳಿಯ ಮೇಲೆ ನಿಂತಿದ್ದಾರೆ. ಇದೇ ವೇಳೆ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರು ನಿಂತಿದ್ದ ಹಳಿಯ ಮೇಲೆ ಬಂದಿದೆ. ಪರಿಣಾಮ ಹಳಿಯ ಮೇಲಿಂದ ಇಳಿಯದೇ ಅಲ್ಲೇ ನಿಂತಿದ್ದವರ ಪೈಕಿ 13 ಮಂದಿ ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿದ್ದಾರೆ. ಬೆಂಕಿಯಿಂದಾಗಿ ಅಪಘಾತ ಸಂಭವಿಸಿದೆ ಎನ್ನುವುದು ಸುಳ್ಳು, ಸದ್ಯ ಮೃತರ ಪೈಕಿ 10 ಜನರನ್ನು ಗುರುತಿಸಲಾಗಿದೆ ಎಂದು ಹೇಳಿದರು. ರೈಲ್ವೆ ಇಲಾಖೆ ಮೃತರ ಕುಟಂಬಸ್ಥರಿಗೆ 1.5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಸಂಭವಿಸಿದ ಅವಘಡದಲ್ಲಿ ರೈಲ್ವೆಯಿಂದ ಯಾವುದೇ ಸಮಸ್ಯೆಯಾಗಿರಲಿಲ್ಲ. 4.45ಕ್ಕೆ ಪುಷ್ಪಕ್ ಎಕ್ಸ್‌ಪ್ರೆಸ್ ನಿಂತ 20 ನಿಮಿಷಗಳ ಬಳಿಕ 5.05ಕ್ಕೆ ಕರ್ನಾಟಕ ಎಕ್ಸ್‌ಪ್ರೆಸ್ ಬಂದಿದೆ. ಆದರೆ ಜನರು ಹಳಿ ಬಿಟ್ಟು ಕದಡದ ಕಾರಣ ದುರಂತ ಆಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟೀಕರಣ ನೀಡಿದೆ.