(ನ್ಯೂಸ್ ಕಡಬ) newskadaba.com ಜ.24: ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್’ನ ಬಿದಿರು ತಳ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಕಾಡ್ಗಿಚ್ಚು ಕುರಿತು ವಿವರವಾದ ವರದಿ ಸಲ್ಲಿಸುವಂತ ಅರಣ್ಯ ಇಲಾಖೆಗೆ ರಾಜ್ಯ ಸರ್ಕಾರ ಗುರುವಾರ ಸೂಚನೆ ನೀಡಿದೆ. ಕಾಡ್ಗಿಚ್ಚಿನಿಂದ ಆಗಿರುವ ಹಾನಿ, ತಡೆಗಟ್ಟಲು ಕೈಗೊಂಡಿರುವ ಕ್ರಮಗಳು ಹಾಗೂ ಬೆಂಕಿ ನಂದಿಸಲು ತೆಗೆದುಕೊಂಡ ಸಮಯದ ಬಗ್ಗೆ 7 ದಿನಗಳೊಳಗೆ ವರದಿ ಸಲ್ಲಿಸುವಂತೆ ಸಚಿವ ಈಶ್ವರ್ ಖಂಡ್ರೆಯವರು ಸೂಚನೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು, ಯಾವುದೇ ರೀತಿಯ ಪರಿಸ್ಥಿತಿ ಎದುರಾದರೂ ಸನ್ನದ್ಧರಾಗಿರುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅರಣ್ಯ ಇಲಾಖೆಯ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ, ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಡ್ಗಿಚ್ಚು ತಡೆಯಲು, ಅಗ್ನಿಶಾಮಕ ಸಾಧನಗಳು ಮತ್ತು ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿ, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.
ಅರಣ್ಯ ಅಧಿಕಾರಿಯೊಬ್ಬರು ಮಾತನಾಡಿ, ದಕ್ಷಿಣ ಕನ್ನಡದ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಎದುರಾಗಿದ್ದು, ಇದು ಚಾರ್ಮಾಡಿ ಘಾಟ್‌ಗೂ ವ್ಯಾಪಿಸಿದೆ. ಸುಮಾರು 7-8 ಎಕರೆ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಲವಾದ ಗಾಳಿಯಿಂದಾಗಿ ಬೆಂಕಿಯ ಕೆನ್ನಾಲಿಗೆ ಇತರೆಡೆಗೂ ಹರಡಿದೆ. ಬೆಂಕಿ ಹೊತ್ತಿಕೊಂಡಿರುವುದಕ್ಕೆ ಸ್ಥಳೀಯ ಕೈವಾಡವನ್ನೂ ತಳ್ಳಿ ಹಾಕುವಂತಿಲ್ಲ. ಡಿಸೆಂಬರ್‌ನಲ್ಲಿ ಈ ಪ್ರದೇಶದಲ್ಲಿ ಮಳೆಯಾಗಿದ್ದರೂ, ಪ್ರಸ್ತುತದ ಬಿಸಿಲಿಗೆ ಹುಲ್ಲು ಒಣಗಿದೆ ಎಂದು ಹೇಳಿದರು.