(ನ್ಯೂಸ್ ಕಡಬ) newskadaba.com ಜ.20 ತಿರುಪತಿ: ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿವಾದದ ಮೂಲಕ ಸಂಚಲನ ಮೂಡಿಸಿದ್ದ ವಿಶ್ವವಿಖ್ಯಾತ ತಿರುಪತಿ ಇದೀಗ ಮತ್ತೆ ಸುದ್ದಿಯಲ್ಲಿದೆ. ತಮಿಳುನಾಡು ಮೂಲದ ಭಕ್ತರ ಗುಂಪೊಂದು ತಿರುಮಲದ ಪವಿತ್ರ ಬೆಟ್ಟದಲ್ಲಿ ಮೊಟ್ಟೆ ಬಿರಿಯಾನಿ ತಿನ್ನುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಆಂಧ್ರಪ್ರದೇಶದ ತಿರುಮಲದ ರಾಂಬಾಗಿಚಾ ಬಸ್ ನಿಲ್ದಾಣದ ಬಳಿ ಮಾಂಸಾಹಾರಿ ಆಹಾರವನ್ನು ಸೇವಿಸುವ ಮೂಲಕ ಪುಣ್ಯ ಕ್ಷೇತ್ರದ ನಡವಳಿಕೆಯನ್ನು ಉಲ್ಲಂಘಿಸಿದ ಭಕ್ತರಿಗೆ ಸ್ಥಳೀಯ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಲ್ಲಿ ಮಾಂಸಾಹಾರಿಯನ್ನು ನಿಷೇಧಿಸಲಾಗಿದೆ ಎಂಬುದು ತಮಗೆ ತಿಳಿದಿಲ್ಲ ಎಂದು ಭಕ್ತರ ಗುಂಪು ಹೇಳಿಕೊಂಡಿದೆ. ಯಾತ್ರಾರ್ಥಿಗಳು ಮೊಟ್ಟೆ ಬಿರಿಯಾನಿ ತಿನ್ನುತ್ತಿರುವುದನ್ನು ಗಮನಿಸಿದ ತಿರುಮಲ ಪೊಲೀಸರು, ಮೊದಲು ಅವರ ನಡೆಯನ್ನು ಪ್ರಶ್ನಿಸಿದ್ದು, ಎಚ್ಚರಿಕೆ ನೀಡಿ ತೆರಳಿದ್ದರು ಎನ್ನಲಾಗಿದೆ. ತಮಿಳುನಾಡಿನ ತಿರುವಳ್ಳೂರು ಸಮೀಪದ ಗುಮ್ಮಡಿಪುಡಿ ಗ್ರಾಮದಿಂದ ಭಕ್ತರು ತಿರುಮಲಕ್ಕೆ ತೆರಳಿದ್ದರು ಎಂಬ ಮಾಹಿತಿಯಿದೆ.