(ನ್ಯೂಸ್ ಕಡಬ) newskadaba.com ಜ.20 ಬೆಂಗಳೂರು: ರಾಜ್ಯದಲ್ಲಿ ಗೋಹಿಂಸೆ ಹಾಗೂ ಗೋಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಚಾಮರಾಜಪೇಟೆ ಹಸು ಕೆಚ್ಚಲು ಕೊಯ್ದ ಘಟನೆ ಬೆನ್ನಲ್ಲೇ ಹೊನ್ನಾವರದಲ್ಲಿ ಹಸು ಕೊಂದಿರುವ ಘಟನೆ ವರದಿಯಾಗಿದ್ದು, ಎಲ್ಲೆಡೆ ತೀವ್ರ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಗೋಹತ್ಯೆ ಹಾಗೂ ಗೋಹಿಂಸೆ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಈ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಪೊಲೀಸರಿಗೆ ಮತ್ತೊಮೆ ಸೂಚನೆ ನೀಡಿದ್ದೇನೆಂದು ಹೇಳಿದರು.
ಇದೇ ವೇಳೆ ಸೆಂಟ್ರಲ್ ಜೈಲು ವಿಭಜನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ವಿಭಾಗಿಸುವ ಯಾವುದೇ ಪ್ರಸ್ತಾವನೆಗಳು ಸದ್ಯಕ್ಕೆ ಸರ್ಕಾರದ ಮುಂದಿಲ್ಲ. ಆದರೆ, ರಾಜ್ಯದ ಎಲ್ಲಾ ಜೈಲುಗಳಲ್ಲಿ ನಡೆಯುತ್ತಿರುವ ನಿಯಮ ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಕಠಿಣ ಕ್ರಮ ಜರುಗಿಸಲಾಗುವುದು. ಬಹಳ ವರ್ಷಗಳಿಂದಲೂ ಬಂಧೀಖಾನೆ ಇಲಾಖೆಗೆ ನೇಮಕಾತಿಗಳು ನಡೆದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಸಿಬ್ಬಂದಿಗಳ ನೇಮಕಾತಿಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗಿದೆ. ನೇಮಕಾತಿ ಬಳಿಕ ವ್ಯವಸ್ಥೆ ಸುಧಾರಣೆಯಾಗಲಿದೆ ಎಂದರು.