ಉತ್ತರ ಕನ್ನಡದಲ್ಲಿ ಅಮಾನವೀಯ ಘಟನೆ: ಗರ್ಭಿಣಿ ಹಸುವಿನ ತಲೆ-ಕಾಲು ಕಡಿದು ಹತ್ಯೆ; ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಜ.20 ಸಾಲ್ಕೋಡು : ಬೆಂಗಳೂರಿನಲ್ಲಿ ಮೂರು ಹಸುಗಳ ಕೆಚ್ಚಲು ಕಡಿದ ಘಟನೆ ಬೆನ್ನಲ್ಲೇ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಗರ್ಭಿಣಿ ಹಸುವಿನ ತಲೆ-ಕಾಲು ಕಡಿದು, ಹೊಟ್ಟೆ ಸೀಳಿ ಕರುವನ್ನೂ ಹತ್ಯೆ ಮಾಡಿದ ಘೋರ ಘಟನೆಯೊಂದು ವರದಿಯಾಗಿದೆ.

ಕೊಂಡಾಕುಳಿಯ ಕೃಷ್ಣ ಆಚಾರಿ ಎಂಬುವವರು ಶನಿವಾರ ಹಸುವನ್ನು ಮೇಯಲು ಬಿಟ್ಟಿದ್ದರು. ರಾತ್ರಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಡಿದರೂ ಸಿಕ್ಕಿರಲಿಲ್ಲ. ಭಾನುವಾರ ಬೆಳಗ್ಗೆ ಹಸು ಹತ್ಯೆ ಮಾಡಿರುವ ಕುರುಹು ಪತ್ತೆಯಾಗಿದೆ.

ಹತ್ಯೆ ಮಾಡಿದ ಸ್ಥಳದಲ್ಲಿ ಹಸುವಿನ ತಲೆ ಒಂದು ಕಡೆ, ಕಾಲುಗಳು ಮತ್ತೊಂದು ಕಡೆ ಪತ್ತೆಯಾಗಿದೆ. ಜೊತೆಗೆ ಗರ್ಭ ಧರಿಸಿದ್ದ ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನು ಕೂಡಾ ದಾರುಣವಾಗಿ ಹತ್ಯೆ ಮಾಡಿ ಅದನ್ನೂ ಅಲ್ಲೇ ಎಸೆದು ದನದ ಮಾಂಸವನ್ನು ಕೊಂಡೊಯ್ದಿದ್ದಾರೆ. ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೃಷ್ಣ ಆಚಾರಿ ಅವರು, ಹೊನ್ನಾವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕಳೆದ 10 ವರ್ಷಗಳಿಂದ ನಾನು ಸಾಕಿದ್ದ ಕಪ್ಪು ಬಣ್ಣದ ಆಕಳನ್ನು ಜ. 18 ರಿಂದ 19ರ ನಡುವಿನ ಅವಧಿಯಲ್ಲಿ ಕಳವು ಮಾಡಿ ಅದನ್ನು ಸಾಯಿಸಿ ಗರ್ಭದಲ್ಲಿದ್ದ ಕರು ಸ್ಥಳದಲ್ಲಿ ಬಿಟ್ಟು ಆಕಳಿನ ಮಾಂಸ ತೆಗೆದುಕೊಂಡು ಹೋಗಿದ್ದಾರೆ ಎಂದು ಕೃಷ್ಣ ಆಚಾರಿ ದೂರಿನಲ್ಲಿ ತಿಳಿಸಿದ್ದಾರೆ.

Also Read  ರಾಹುಲ್ ಗಾಂಧಿ ವಿರುದ್ದ ಎಫ್ಐಆರ್ ದಾಖಲು..!

error: Content is protected !!
Scroll to Top