(ನ್ಯೂಸ್ ಕಡಬ) newskadaba.com ಜ.18 ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಆಪ್ ಭರಪೂರ ‘ಉಚಿತ ಭರವಸೆ’ಗಳನ್ನು ಘೋಷಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಕೂಡ ತನ್ನ ಪ್ರಣಾಳಿಕೆಯಲ್ಲಿ ದೆಹಲಿ ಜನತೆಗೆ ಹಲವು ಅಂಥದ್ದೇ ಭರವಸೆ ಪ್ರಕಟಿಸಿದೆ.
ದೆಹಲಿಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕದ ಗೃಹಲಕ್ಷ್ಮಿ ಯೋಜನೆ ಮಾದರಿಯಲ್ಲಿ ಮಹಿಳೆಯರಿಗೆ ಮಾಸಿಕ 2500 ರು., 500 ರು. ಗೆ ಎಲ್ಪಿಜಿ ಹಾಗೂ ಹಿರಿಯರಿಗೆ 2500 ಮಾಸಿಕ ಪಿಂಚಣಿ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತರುವುದಾಗಿ ಪಕ್ಷ ಘೋಷಿಸಿದೆ.ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಪತ್ರಿಕಾಗೋಷ್ಠಿಯಲ್ಲಿ ‘ಸಂಕಲ್ಪ ಪತ್ರ’ ಹೆಸರಿನ ಪ್ರಣಾಳಿಕೆಯ ಮೊದಲ ಭಾಗವನ್ನು ಬಿಡುಗಡೆ ಮಾಡಿ, ‘ಪಕ್ಷದ ಪ್ರಣಾಳಿಕೆಯು ದೆಹಲಿ ಅಭಿವೃದ್ಧಿಗೆ ತಳಪಾಯವಾಗಲಿದೆ’ ಎಂದರು.
ಇನ್ನು ಇದೇ ವೇಳೆ ಆಪ್ ವಿರುದ್ಧ ವಾಗ್ದಾಳಿ ನಡೆಸಿದ ನಡ್ಡಾ, ಆಪ್ ಸರ್ಕಾರದಲ್ಲಿನ ಎಲ್ಲ ಭ್ರಷ್ಟಚಾರ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಫೆ. 5 ರಂದು ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, 8ಕ್ಕೆ ಫಲಿತಾಂಶ ಹೊರ ಬೀಳಲಿದೆ.