(ನ್ಯೂಸ್ ಕಡಬ) newskadaba.com ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಜೆಟ್ ನಲ್ಲಿ ಘೋಷಿಸಿದ್ದಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಶುಕ್ರವಾರ ಶಂಕು ಸ್ಥಾಪನೆ ನೆರವೇರಿಸಿ ಮತ್ತೊಮ್ಮೆ ನುಡಿದಂತೆ ನಡೆದ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಯನ್ನು ಮುಂದುವರೆಸಿದ್ದಾರೆ.
ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ರಾಜೀವ್ ಗಾಂಧಿ ವಿವಿ, ಏಷ್ಯಾದ ಅತ್ಯಂತ ದೊಡ್ಡ ಆರೋಗ್ಯ ವಿಶ್ವ ವಿದ್ಯಾಲಯ ಆಗಿದೆ. 3.5 ಲಕ್ಷ ವೈದ್ಯ ವಿದ್ಯಾರ್ಥಿಗಳಿರುವ ಅತ್ಯಂತ ದೊಡ್ಡ ಆರೋಗ್ಯ ವಿವಿ ಇದಾಗಿದೆ. ಆದ್ದರಿಂದ ಗುಣಮಟ್ಟದ ವೈದ್ಯರನ್ನು ರೂಪಿಸುವುದರ ಜೊತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ರಾಜೀವ್ ಗಾಂಧಿ ವಿವಿಯ ಕೊಡುಗೆ ಅಪಾರವಾಗಿದೆ ಎಂದರು. ಸರ್ಕಾರಿ ಆಸ್ಪತ್ರೆಗಳೂ ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ಶುಚಿತ್ವ ಮತ್ತು ನಿರ್ವಹಣೆ ಕಾಪಾಡುವ ಜೊತೆಗೆ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಸಿಗುವಂತಾಗಬೇಕು. ಶ್ರೀಮಂತರು ಮತ್ತು ನಮ್ಮಂಥಾ ರಾಜಕಾರಣಿಗಳೂ ಸರ್ಕಾರಿ ಆಸ್ಪತ್ರೆಗೆ ಬರುವಂಥಾಗಬೇಕು ಎನ್ನುವ ದಿಕ್ಕಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದರು.