(ನ್ಯೂಸ್ ಕಡಬ) newskadaba.com ಬೆಂಗಳೂರು: ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೆಟ್ ಕಚೇರಿ ಸ್ಥಾಪನೆಯಿಂದ ಸಾಕಷ್ಟು ಅನುಕೂಲವಾಗಲಿದೆ. ಐಟಿ-ಬಿಟಿ, ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಅನುಕೂಲವಾಗಲಿದೆ. ಮುಂಬೈ ಬಳಿಕ ಬೆಂಗಳೂರಿನಲ್ಲಿ ಅಮೆರಿಕ ದೂತವಾಸ ಕಚೇರಿ ಆರಂಭವಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಕಚೇರಿ ಉದ್ಘಾಟನೆ ಬಳಿಕ ಮಾತನಾಡಿದ ಅವರು ಅಮೆರಿಕಾದ ರಾಯಭಾರ ಕಚೇರಿ ಆಗಬೇಕೆಂದು ಎಸ್ಎಂ ಕೃಷ್ಣ ಅವರು ಸಿಎಂ ಆಗಿದ್ದಾಲೇ ಪ್ರಯತ್ನ ನಡೆಸಿದ್ದರು. ಅಂದು ಪ್ರಧಾನಿಯಾಗಿದ್ದ ವಾಜಪೇಯಿಯವರನ್ನು ಭೇಟಿ ಮಾಡಲಾಗಿತ್ತು. ಅಲ್ಲಿಂದ ಪ್ರಯತ್ನ ನಡೆದರೂ ಆಗಿರಲಿಲ್ಲ. ಇದೀಗ ಅನುಷ್ಠಾನವಾಗುತ್ತಿದೆ, ಖುಷಿಯ ವಿಚಾರ. ಬೆಂಗಳೂರು ಜಾಗತಿಕವಾಗಿ ಬೆಳೆದಿದೆ. ಯೋಜನಾ ಬದ್ಧವಾದ ನಗರ ಅಲ್ಲದ ಕಾರಣ ಒಂದಷ್ಟು ಸಮಸ್ಯೆ ಇರಬಹುದು, ಅದನ್ನು ಪರಿಹರಿಸಲು ಪ್ರಯತ್ನ ನಡೆಸಲಾಗಿದೆ ಎಂದರು.
ಕರ್ನಾಟಕದ ಜನರು ಅಮೆರಿಕಾ ವೀಸಾಕ್ಕಾಗಿ ಇಲ್ಲಿಯವರೆಗೆ ದೆಹಲಿ, ಚೆನ್ನೈ, ಹೈದರಾಬಾದ್ ಮತ್ತು ಮುಂಬೈಗೆ ಹೋಗಬೇಕಿತ್ತು. ಆದರೆ ಇನ್ಮುಂದೆ ಈ ಕಷ್ಟ ಇರುವುದಿಲ್ಲ. ಕನ್ನಡಿಗರು ಇನ್ಮುಂದೆ ಬೆಂಗಳೂರಿನಲ್ಲೇ ವೀಸಾ ಪಡೆಯಬಹುದಾಗಿದೆ. ಆದರೆ, ವೀಸಾ ಸೇವೆ ಇನ್ನೂ ತಡವಾಗಲಿದೆ.
ಈಗಾಗಲೇ 12 ದೂತಾವಾಸ ಕಚೇರಿ ಬೆಂಗಳೂರಲ್ಲಿವೆ. ಇನ್ನಷ್ಟು ದೇಶಗಳು ಇಲ್ಲಿ ದೂತವಾಸ ಕಚೇರಿ ತೆರೆಯಬೇಕೆಂದು ನಮ್ಮ ಬಯಕೆ ಇದೆ. ಅಮೆರಿಕ ಮತ್ತು ಭಾರತದ ಬಾಂಧವ್ಯ ವೃದ್ಧಿಗೆ ನಿರಂತರ ಪ್ರಯತ್ನ ನಡೆಯುತ್ತಿದೆ. ಬೆಂಗಳೂರಿಗೆ ಸಾಕಷ್ಟು ಸಾಮರ್ಥ್ಯ ಇದ್ದು ಅದರ ಬಳಕೆಯಾಗಬೇಕು. ಬೆಂಗಳೂರಿನಲ್ಲಿ 1 ವರ್ಷದಲ್ಲಿ 8.80 ಲಕ್ಷ ಪಾಸ್ ಪೋರ್ಟ್ ವಿತರಣೆಯಾಗಿದೆ. ಅಂದರೆ 10 ವರ್ಷ ಅವಧಿಯಲ್ಲಿ ಎಷ್ಟು ಪಾಸ್ ಪೋರ್ಟ್ ವಿತರಣೆಯಾಗಿರಬಹುದು, ಅದರ ಮಹತ್ವ ಅರಿಯಬೇಕು ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದರು.