(ನ್ಯೂಸ್ ಕಡಬ) newskadaba.com ಕಡಬ, ಜ.12. ಹಾಡಹಗಲೇ ಮನೆಯೊಂದರ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ನಗದು ಮತ್ತು ಚಿನ್ನಾಭರಣ ದೋಚಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ 102 ನೆಕ್ಕಿಲಾಡಿ ಗ್ರಾಮದ ಬಜಕೆರೆ ಎಂಬಲ್ಲಿ ಭಾನುವಾರದಂದು ನಡೆದಿದೆ.
ಬಜಕೆರೆ ನಿವಾಸಿ ಜೇಮ್ಸ್ ಎಂಬವರು ಭಾನುವಾರದಂದು ನೆಲ್ಯಾಡಿಯಲ್ಲಿ ನಡೆದ ಕಾರ್ಯಕ್ರಮಕ್ಕೆಂದು ಬೀಗ ಹಾಕಿ ತೆರಳಿದ್ದರು. ಸಂಜೆ ವೇಳೆಗೆ ಮನೆ ಮಂದಿ ಹಿಂತಿರುಗಿದಾಗ ಮನೆಯ ಹಿಂಬಾಗಿಲ ಬೀಗ ಮುರಿದು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಮನೆಯ ಕಪಾಟಿನಲ್ಲಿದ್ದ 10 ಪವನ್ ಚಿನ್ನಾಭರಣ ಹಾಗೂ ಒಂದು ಲಕ್ಷ ನಗದನ್ನು ಕಳ್ಳರು ದೋಚಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಗ್ರಾಮಾಂತರ ಇನ್ಸ್‌ಪೆಕ್ಟರ್ ರವಿ ಬಿ.ಎಸ್., ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಅಭಿನಂದನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಶ್ವಾನ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.