ಬಗರ್ ಹುಕುಂ ಅಡಿ 5,600 ರೈತರಿಗೆ ಡಿಜಿಟಲ್ ಭೂ ದಾಖಲೆಗಳ ವಿತರಣೆ: ಸಚಿವ ಕೃಷ್ಣ ಬೈರೇಗೌಡ

(ನ್ಯೂಸ್ ಕಡಬ) newskadaba.com ಜ.11 ಬೆಂಗಳೂರು: ಬಗರ್ ಹುಕುಂ ಅಡಿಯಲ್ಲಿ ಈ ತಿಂಗಳು 5,600 ರೈತರಿಗೆ ಡಿಜಿಟಲ್ ಭೂ ದಾಖಲೆಗಳ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಹೇಳಿದರು.

Nk Cake House

ಶುಕ್ರವಾರ ತಹಶೀಲ್ದಾರ್‌ಗಳು ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ ಸಚಿವರು, ಅಕ್ರಮ-ಸಕ್ರಮ ಬಗರ್‌ ಹುಕುಂ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಜಮೀನು ಪಡೆಯಲು ಅರ್ಹರು. ಅಂತವರಿಗೆ ಸಾಗುವಳಿ ಚೀಟಿ ನೀಡುವುದು ಸರ್ಕಾರದ ಕರ್ತವ್ಯ. ಒಂದು ವೇಳೆ ಅರ್ಜಿ ಸಲ್ಲಿಸಿದವರು ಮೃತಪಟ್ಟಿದ್ದರೆ ಅವರಿಗೆ ಸಂಬಂಧಿಸಿದ ಅರ್ಹ ಕುಟುಂಬಸ್ಥರಿಗೆ ಜಮೀನು ಮಂಜೂರುಗೊಳಿಸಬೇಕು ಎಂದು ಹೇಳಿದರು.

ಅನುಕೂಲಸ್ಥರಿಗೆ ಎಲ್ಲಾ ಮಾಹಿತಿ ಇರುತ್ತದೆ. ತಮಗೆ ಬೇಕಾದ ಸರ್ಕಾರಿ ಸವಲತ್ತನ್ನು ತಾವಾಗಿಯೇ ಪಡೆದುಕೊಳ್ಳುತ್ತಾರೆ. ಆದರೆ, ಬಡವರಿಗೆ, ಸಮಾಜದ ಕಟ್ಟಕಡೆಯ ಸ್ತರದಲ್ಲಿ ಬದುಕುತ್ತಿರುವವರಿಗೆ ಮಾಹಿತಿ ಕೊರತೆ ಇರುತ್ತದೆ. ಇಂತವರಿಗೆ ಅಧಿಕಾರಿಗಳೇ ಮಾಹಿತಿ ನೀಡಿ, ಸರ್ಕಾರಿ ಸವಲತ್ತುಗಳನ್ನು ತಲುಪಿಸಬೇಕು. ಬಗರ್‌ ಹುಕುಂ ಅರ್ಜಿ ಅರ್ಹವಾಗಿದ್ದಲ್ಲಿ ಅಧಿಕಾರಿಗಳೇ ಜವಾಬ್ದಾರಿ ವಹಿಸಿಕೊಂಡು ಜಮೀನು ಮಂಜೂರು ಮಾಡಬೇಕು, ಜನವರಿ 15ರ ಒಳಗೆ 15,000 ಫಲಾನುಭವಿಗಳಿಗೆ ಬಗರ್‌ ಹುಕುಂ ಯೋಜನೆಯ ಅಡಿಯಲ್ಲಿ ಸಾಗುವಳಿ ಚೀಟಿ ನೀಡಬೇಕು ಎಂಬ ಗುರಿಯನ್ನು ಅಧಿಕಾರಿಗಳಿಗೆ ನೀಡಲಾಗಿತ್ತು. ಈ ಗುರಿಯನ್ನು ಸಾಧಿಸಲಾಗದಿದ್ದರೂ ಇದೇ ಅವಧಿಯಲ್ಲಿ ಕನಿಷ್ಟ 5600ಕ್ಕೂ ಅಧಿಕ ಅರ್ಹ ಫಲಾನುಭವಿಗಳನ್ನು ಗುರುತಿಸಿರುವುದು ಹಾಗೂ ಎಲ್ಲಾ ಜಿಲ್ಲೆ-ತಾಲೂಕುಗಳಲ್ಲೂ ಈ ಸಂಬಂಧ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿರುವುದು ಉತ್ತಮ ಬೆಳವಣಿಗೆ. ಶೀಘ್ರವೇ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಜಮೀನು ಮಂಜೂರುಗೊಳಿಸಿ ಎಂದು ಸೂಚಿಸಿದರು.

Also Read  ಅಮೂಲ್ ಜೊತೆ ನಂದಿನಿ ವಿಲೀನ ಇಲ್ಲ ➤ ಸಿಎಂ ಬೊಮ್ಮಾಯಿ ಸ್ಪಷ್ಟನೆ

error: Content is protected !!
Scroll to Top