(ನ್ಯೂಸ್ ಕಡಬ) newskadaba.com ಜ.10 ನವದೆಹಲಿ: ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ಜೋಡಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿ 2023ರ ಅಕ್ಟೋಬರ್ 17ರಂದು ತಾನು ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ಗುರುವಾರ ವಜಾಗೊಳಿಸಿದ್ದು, ಕೋರ್ಟ್ ಆದೇಶದಲ್ಲಿ ಯಾವುದೇ ತಪ್ಪಿಲ್ಲ, ಹೀಗಾಗಿ ಅದರಲ್ಲಿ ಯಾವುದೇ ಹಸ್ತಕ್ಷೇಪ ಬೇಡ ಎಂದಿದೆ.
‘ಈ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಸೂರ್ಯಕಾಂತ, ಬಿ.ವಿ.ನಾಗರತ್ನಾ, ಪಿ.ಎಸ್.ನರಸಿಂಹ ಹಾಗೂ ದೀಪಂಕರ್ ದತ್ತಾ ಅವರು ಇದ್ದ ನ್ಯಾಯಪೀಠ ಹೇಳಿದೆ. ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಹಾಗೂ ಹಿಮಾ ಕೊಹ್ಲಿ ನೀಡಿರುವ ಹಾಗೂ ನಾವು ಇರುವ ಈ ಪೀಠದ ತೀರ್ಪುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ಎರಡೂ ತೀರ್ಪುಗಳು ಕಾನೂನಿಗೆ ಅನುಗುಣವಾಗಿಯೇ ಇದ್ದು, ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವ ಅಗತ್ಯ ಕಂಡುಬಂದಿಲ್ಲ’ ಎಂದು ಪೀಠ ಹೇಳಿದೆ.