(ನ್ಯೂಸ್ ಕಡಬ) newskadaba.com ಜ.09 ಬೆಂಗಳೂರು: ಬಂಡೀಪುರ ಅರಣ್ಯದಲ್ಲಿ ನಿರ್ಧಿಷ್ಟ ವಾಹನಗಳಿಗೆ ರಾತ್ರಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿರುವುದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಈಶ್ವರ ಖಂಡ್ರೆ ಅವರೇ, ನೀವು ಕರ್ನಾಟಕದ ಅರಣ್ಯ ಸಚಿವರೋ? ಕೇರಳದ ಅರಣ್ಯ ಸಚಿವರೋ? ಎಂದು ತರಾಟೆಗೆ ತೆಗೆದುಕೊಂಡಿದೆ.
ಬಂಡೀಪುರದಲ್ಲಿ ವನ್ಯಜೀವಿಗಳ ಸಂರಕ್ಷಣೆ ಮಾಡಬೇಕಾಗಿದ್ದು ಅರಣ್ಯ ಸಚಿವರ ಕೆಲಸ. ಅದನ್ನು ಬಿಟ್ಟು ಕೇರಳದ ಲಾಭಿಗೆ ಮಣಿದು ಕಾಂಗ್ರೆಸ್ ನಾಯಕರಿಗೆ ರಾತ್ರಿ ವೇಳೆ ಅರಣ್ಯ ಪ್ರದೇಶದಲ್ಲಿ ಸುತ್ತಿ ಮೋಜು ಮಸ್ತಿ ಮಾಡಲು ಅವಕಾಶ ಮಾಡಿ ಕೊಡುತ್ತಿದ್ದಿರಾ. ಈ ಮೂಲಕ ವನ್ಯಜೀವಿಗಳ ಜೀವಕ್ಕೆ ಕಂಟಕ ತಂದಿದ್ದಿರಿ ಎಂದು ಟೀಕೆ ಮಾಡಿದೆ.ಈ ಹಿಂದೆ ವಯನಾಡು ಮಾಜಿ ಸಂಸದ ರಾಹುಲ್ ಗಾಂಧಿ ಅವರ ತಾಳಕ್ಕೆ ಕುಣಿದು ಕನ್ನಡಿಗರ ತೆರಿಗೆ ಹಣವನ್ನು ನೀಡಿದ್ದೀರಿ. ಇದೀಗ ರಾಹುಲ್ ಗಾಂಧಿಯವರ ಸಹೋದರಿ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಮೆಚ್ಚಿಸಲು ಬಂಡೀಪುರದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ಕೊಟ್ಟಿದ್ದೀರಿ. ಕರ್ನಾಟಕದ ಅರಣ್ಯ ರಕ್ಷಣೆಗೆ ನಿಂತಿದ್ದಿರೋ ಅಥವಾ ಬಂಡೀಪುರದಲ್ಲಿ ವನ್ಯಜೀವಿಗಳ ಸರ್ವನಾಶಕ್ಕೆ ನಿಂತಿದ್ದಿರೋ? ಎಂದು ಪ್ರಶ್ನೆ ಮಾಡಿದೆ.