(ನ್ಯೂಸ್ ಕಡಬ) newskadaba.com ಜ.09 ಬೆಂಗಳೂರು: ಬಸ್ ಪ್ರಯಾಣ ದರವನ್ನು ಶೇಕಡಾ 15 ರಷ್ಟು ಹೆಚ್ಚಿಸಿದ ಕೆಲವೇ ದಿನಗಳಲ್ಲಿ, ಕೆಎಸ್‌ಆರ್‌ಟಿಸಿ ಗುತ್ತಿಗೆ ಆಧಾರದ ಮೇಲೆ ಪಡೆಯುವ ಬಸ್ ಗಳ ಪ್ರಯಾಣ ದರವನ್ನೂ ಹೆಚ್ಚಳ ಮಾಡಿದೆ.
ಪ್ರವಾಸ, ತೀರ್ಥ ಯಾತ್ರೆ, ರಾಜಕೀಯ ರ್ಯಾಲಿ ಮದುವೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಕೆಎಸ್ಆರ್’ಟಿಸಿ ಬಸ್ ಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ಈ ಬಸ್ ಗಳ ದರವನ್ನೂ ಇದೀಗ ಪರಿಷ್ಕರಿಸಲಾಗಿದೆ. ಇಷ್ಟು ದಿನ ಪ್ರತಿ ಕಿಮೀ.ಗೆ 47 ರೂ ದರದಲ್ಲಿ ಬಸ್ ಗಳನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಇದೀಗ ಈ ದರನ್ನು 54 ರೂ.ಗೆ ಪರಿಷ್ಕರಿಸಲಾಗಿದ್ದು, ಇದರ ಪರಿಣಾಮ ಪ್ರತಿ ಕಿ.ಮೀ.ಗೆ 7 ರೂ. ಹೆಚ್ಚಳವಾಗಿದೆ. ಕರ್ನಾಟಕದ ಹೊರಗಿನ ಸೇವೆಗಳಿಗೆ, ಪ್ರತಿ ಕಿ.ಮೀ.ಗೆ 50 ರೂ.ನಿಂದ 57 ರೂ.ಗೆ ಹೆಚ್ಚಿಸಲಾಗಿದೆ.
ರಾಜ್ಯದೊಳಗೆ ಪ್ರತಿ ಕಿ.ಮೀ.ಗೆ 52 ರೂ.ನಂತೆ ಕಾರ್ಯನಿರ್ವಹಿಸುತ್ತಿದ್ದ ಅಶ್ವಮೇಧ ಸೇವೆಗಳನ್ನು ಪ್ರತಿ ಕಿ.ಮೀ.ಗೆ 58 ರೂ.ಗೆ ಹೆಚ್ಚಿಸಲಾಗಿದೆ, ಇದರಂತೆ ಪ್ರತಿ ಕಿ.ಮೀ.ಗೆ 6 ರೂ. ಹೆಚ್ಚಳವಾಗಿದೆ. ರಾಜಹಂಸ, ಐರಾವತ, ಪಲ್ಲಕ್ಕಿ, ಅಂಬಾರಿ, ಮಿಡಿ ಬಸ್, ಎಸಿ ಅಲ್ಲದ ಸ್ಲೀಪರ್, ಫ್ಲೈ ಬಸ್ ಮತ್ತು ಇತರ ಎಲ್ಲಾ ಬಸ್ ಸೇವೆಗಳ ದರವನ್ನೂ ಹೆಚ್ಚಳ ಮಾಡಲಾಗಿದೆ. ಮುಂಗಡವಾಗಿ ಸೇವೆಗಳನ್ನು ಬುಕ್ ಮಾಡಿದವರಿಗೆ ಹಳೆಯ ದರಗಳ ಪ್ರಕಾರ ಶುಲ್ಕ ವಿಧಿಸಲಾಗುತ್ತದೆ. ಅಶ್ವಮೇಧದ ದರಗಳು ಕರ್ನಾಟಕದೊಳಗೆ ಪ್ರತಿ ಕಿ.ಮೀ.ಗೆ 58 ರೂ. ಮತ್ತು ರಾಜ್ಯದ ಹೊರಗೆ 61 ರೂ. ಇರಲಿದೆ.