(ನ್ಯೂಸ್ ಕಡಬ) newskadaba.com ಜ.07 ಬೆಂಗಳೂರು: ಮೇಕ್ ಇನ್ ಇಂಡಿಯಾ ದೇಶೀಯವಾಗಿ ತಯಾರಿಸಲಾದ ಮೊದಲ ಚಾಲಕ ರಹಿತ ರೈಲ್ವೆ ಬೋಗಿಗಳು ಇನ್ನು ಕೇವಲ ಹದಿನೈದು ದಿನಗಳಲ್ಲಿ ಬೆಂಗಳೂರು ತಲುಪಲಿವೆ. ಕೊಲ್ಕತ್ತಾದ ತೀನಾಘಡ ರೈಲ್ ಸಿಸ್ಟಂ ಲಿ. ಇದನ್ನು ತಯಾರಿಸಿದೆ. ‘ನಮ್ಮ ಮೆಟ್ರೋ’ದ ಆರ್.ವಿ.ರಸ್ತೆ- ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಲೈನ್‌ನಲ್ಲಿ ಇದು ಓಡಾಡಲಿದೆ.
ಚೀನಾದ ಸಿಆರ್‌ಆರ್‌ಸಿ ರೈಲ್ವೆ ಬೋಗಿ ಉತ್ಪಾದನೆ ಕಂಪನಿಯ ಜೊತೆಗಿನ ಒಪ್ಪಂದದ ಭಾಗವಾಗಿ ಟೆಆರ್‌ಎಸ್ಎಲ್ ನಿರ್ಮಿಸಿದ ಈ ರೈಲು ಸೋಮವಾರ ಹೊರಟಿದ್ದು, ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರಲಿದೆ. ಚೀನಾದಿಂದ 2023ರ ಫೆಬ್ರವರಿಯಲ್ಲಿ ಬಂದಿರುವ ಮೂಲ ಮಾದರಿ ರೈಲಿನ ಬಳಿಕ ಇದೀಗ ದೇಶೀಯವಾಗಿ ಸಿಆರ್‌ಆರ್‌ಸಿ ನಿರ್ಮಿಸಿದ ರೈಲು ನಮ್ಮ ಮೆಟ್ರೋಗೆ ಸೇರ್ಪಡೆ ಆಗುತ್ತಿದೆ.
ಚೀನಾದಿಂದ ಬಂದ ರೈಲಿನ 36 ಪರೀಕ್ಷೆಗಳು ಮುಗಿಯುತ್ತಿವೆ. ದೇಶಿಯವಾಗಿ ನಿರ್ಮಿಸಲಾದ ಕಾರಣ ಈಗ ಬರುವ ರೈಲನ್ನೂ ಕೂಡ ಹಲವು ಬಗೆಯ ತಪಾಸಣೆಗೆ ಒಳಪಡಿಸಲಾಗುವುದು. ರೈಲಿನ ವೇಗ, ತಿರುವಿನಲ್ಲಿ ಸಂಚಾರ, ನಿಲ್ದಾಣದಲ್ಲಿ ನಿಲುಗಡೆ, ನಿಲುಗಡೆ ಆಗುವಾಗ ವೇಗದ ಇಳಿಕೆ, ಬ್ರೇಕ್ ಸಿಸ್ಟಂ, ಸಿಗ್ನಲಿಂಗ್ ಸಿಸ್ಟಂ, ರೈಲಿನ ಒಳಗಡೆಯ ಸ್ಥಿತಿ ಸೇರಿ ಹಲವು ತಪಾಸಣೆ ಮಾಡಿಕೊಳ್ಳಲಾಗುವುದು. ರೈಲ್ವೇ ಮಂಡಳಿಯ ಸುರಕ್ಷತಾ ವಿಭಾಗ, ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡ ಆಗಮಿಸಿ ಒಪ್ಪಿಗೆ ನೀಡಿದ ಬಳಿಕ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಆರಂಭದಲ್ಲಿ ಬಹುತೇಕ ಈ ರೈಲು ಚಾಲಕ ಸಹಿತವಾಗಿಯೇ ಓಡಾಡಲಿದ್ದು, ನಂತರವಷ್ಟೇ ಚಾಲಕರಹಿತವಾಗಿ ಸಂಚರಿಸಲು ಬಿಎಂಆರ್ ಸಿಎಲ್ ಯೋಜಿಸಿದೆ. ದೆಹಲಿಯಲ್ಲೂ ಆರಂಭದಲ್ಲಿ 2 ವರ್ಷ ಚಾಲಕ ಸಹಿತವಾಗಿಯೇ ಚಾಲಕ ರಹಿತ ರೈಲು ಓಡಾಡಿದ್ದವು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.