(ನ್ಯೂಸ್ ಕಡಬ) newskadaba.com ಜ.07 ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ, ಅವರ ಗೆಳತಿ ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳಿಗೆ ಜಾಮೀನು ನೀಡಿರುವ ಹೈಕೋರ್ಟ್ ಆದೇಶ ರದ್ದುಗೊಳಿಸುವಂತೆ ಕೋರಿ ಬೆಂಗಳೂರು ಪೊಲೀಸರು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಇದರಿಂದ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್ ಗೆ ಮತ್ತೆ ಸಂಕಷ್ಟ ಶುರುವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಏಳು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಇಂದು ಮೇಲ್ಮನವಿ ಸಲ್ಲಿಕೆಯಾಗಿದೆ. ಸುಪ್ರೀಂ ಕೋರ್ಟ್ ವಕೀಲರಾದ ಅನಿಲ್ ನಿಶಾನಿ ಅವರು ಪೊಲೀಸರ ಪರವಾಗಿ ಸುಪ್ರೀಂ ಕೋರ್ಟ್ ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್, ಪವಿತ್ರಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್ ಹಾಗೂ ಜಗದೀಶ್ ಅವರಿಗೆ ನೀಡಿರುವ ಜಾಮೀನು ರದ್ದು ಮಾಡುವಂತೆ ಮನವಿ ಮಾಡಿದ್ದಾರೆ.
ಕಳೆದ ಡಿಸೆಂಬರ್ 13 ರಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕ ಸದಸ್ಯಪೀಠ ಆರೋಪಿ ನಂಬರ್ 1, ಪವಿತ್ರಾ ಗೌಡ, 2ನೇ ಆರೋಪಿಯಾಗಿರುವ ದರ್ಶನ್, ಇತರ ಆರೋಪಿಗಳಾದ ಆರ್ ನಾಗರಾಜು, ಅನು ಕುಮಾರ್ ಅಲಿಯಾಸ್ ಅನು, ಲಕ್ಷ್ಮಣ್ ಎಂ, ಜಗದೀಶ್ ಅಲಿಯಾಸ್ ಜಗ್ಗ ಮತ್ತು ಪ್ರದೂಷ್ ಎಸ್ ರಾವ್ ಅವರಿಗೆ ಕಳೆದ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.