(ನ್ಯೂಸ್ ಕಡಬ) newskadaba.com ಜ.03 ನವದೆಹಲಿ: ಆಸ್ತಿಯ ಹಕ್ಕು ಸಾಂವಿಧಾನಿಕ ಹಕ್ಕಾಗಿದ್ದು, ಕಾನೂನಿನ ಪ್ರಕಾರ ಸೂಕ್ತ ಪರಿಹಾರವನ್ನು ನೀಡದೆ ವ್ಯಕ್ತಿಯೊಬ್ಬನ ಆಸ್ತಿಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕಲ್ಯಾಣ ರಾಜ್ಯದಲ್ಲಿ ಆಸ್ತಿಯ ಹಕ್ಕು ಒಬ್ಬ ವ್ಯಕ್ತಿಯ ಮಾನವ ಹಕ್ಕಾಗಿದ್ದು, ಸಂವಿಧಾನದ 300 ಎ ಪರಿಚ್ಛೇದದ ಅಡಿಯಲ್ಲಿ ಸಾಂವಿಧಾನಿಕ ಹಕ್ಕು ಕೂಡ ಆಗಿದೆ. ಯಾವುದೇ ವ್ಯಕ್ತಿಗೆ ಸರಿಯಾದ ಪರಿಹಾರ ನೀಡದೆ ಆತನ ಸ್ವತ್ತನ್ನು ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ(ಜ. 2) ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಕೆ.ವಿ.ವಿಶ್ವನಾಥನ್ ಅವರನ್ನು ಒಳಗೊಂಡ ಪೀಠವು ಕರ್ನಾಟಕ ಸರ್ಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು. ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗಾಗಿ ವಶಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದೇ ಭೂ ಮಾಲೀಕರಾದ ಬರ್ನಾರ್ಡ್ ಫ್ರಾನ್ಸಿಸ್ ಜೋಸೆಫ್ ವಾಜ್ ಮತ್ತು ಇತರರಿಗೆ ಬರೋಬ್ಬರಿ 22 ವರ್ಷಗಳು ಅಲೆದಾಡುವಂತೆ ಮಾಡಿದ ಅಧಿಕಾರಿಗಳ ನಿರ್ಲ್ಯಕ್ಷ್ಯತನದ ನ್ಯಾಯಪೀಠ ಕಿಡಿಕಾರಿತು.