(ನ್ಯೂಸ್ ಕಡಬ) newskadaba.com ಜ.03 ಬೆಂಗಳೂರು: ಇದೇ ತಿಂಗಳ ೫ರಿಂದ ಬಸ್ ಟಿಕೆಟ್ ದರ ಶೇ.೧೫ರಷ್ಟು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ಗುಲಾಬಿ ಹೂ ನೀಡುವ ಮೂಲಕ ಸರ್ಕಾರ ಪಾಪರ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಮೆಜೆಸ್ಟಿಕ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯ ರವಿ ಕುಮಾರ್ ನೇತೃತ್ವದಲ್ಲಿ ಜಮಾಯಿಸಿದ ಬಿಜೆಪಿ ನಾಯಕರು, ಪ್ರಯಾಣಿಕರಿಗೆ ಗುಲಾಬಿ ನೀಡುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮುಖವಾಡ ಧರಿಸಿ, ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಗುಲಾಬಿ ಹೂ ಕೊಟ್ಟ ನಾಯಕರು ತಮ್ಮ ಪ್ರತಿಭಟನೆಯ ಉದ್ದೇಶ ಮನವರಿಕೆ ಮಾಡಿಕೊಟ್ಟರು. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರನ್ನು ಸುಲಿಗೆ ಮಾಡುತ್ತಿದೆ. ಉಚಿತ, ಉಚಿತ ಎನ್ನುವುದನ್ನು ಹೊರತುಪಡಿಸಿ ಇವರು ಏನೂ ಅಭಿವೃದ್ಧಿ ಮಾಡುತ್ತಿಲ್ಲ.
ಇನ್ನೂ, ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ ಸರ್ಕಾರ, ಬಸ್ ದರ ಏರಿಸಿ ಪುರುಷ ಪ್ರಯಾಣಿಕರಿಗೆ ಬರೆ ಹಾಕಿದೆ. ಇದಕ್ಕಾಗಿ ಸರ್ಕಾರವಂತೂ ಕ್ಷಮೆ ಕೇಳುವುದಿಲ್ಲ. ಪ್ರತಿಪಕ್ಷವಾಗಿ ಪುರುಷ ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ ಕ್ಷಮೆ ಕೇಳುತ್ತಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿದರು.