(ನ್ಯೂಸ್ ಕಡಬ) newskadaba.com ಜ.03 ಬೆಂಗಳೂರು: ನಿಗದಿತ ವೇತನ ಮತ್ತು ಪ್ರೋತ್ಸಾಹ ಧನಕ್ಕೆ ಆಗ್ರಹಿಸಿ ಜನವರಿ 7ರಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಆಶಾ ಕಾರ್ಯಕರ್ತೆಯರು ತಿಳಿಸಿದ್ದಾರೆ.
ಆರೋಗ್ಯ ಸೇವೆಗಳ ಜನರಿಗೆ ತಲುಪಿಸಲು ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ. 42,000 ಕಾರ್ಯಕರ್ತೆಯರ ಮನವಿಯ ಹೊರತಾಗಯೂ ಹಲವಾರು ವರ್ಷಗಳಿಂದ ಭರವಸೆಗಲು ಈಡೇರಿಲ್ಲ. ಹಲವು ಸುತ್ತಿನ ಸಭೆಗಳಾದರೂ ನಿರ್ದಿಷ್ಟ ವೇತನ ನೀಡುವ ಭರವಸೆಗೆ ಖಚಿತವಾಗಿ ಉತ್ತರ ನೀಡಿಲ್ಲ. ಹಾಗಾಗಿ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ನಗರ ಪ್ರದೇಶದ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ವೆಚ್ಚಗಳಿಗೆ ಅನುಗುಣವಾಗಿ ರೂ.20 ಸಾವಿರ ಗೌರವಧನ ಹೆಚ್ಚಿಸಬೇಕು. 8 ವರ್ಷಗಳಿಂದ ಆಶಾನಿಧಿ ಪೋರ್ಟಲ್‌ನಲ್ಲಿ ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸಗಳು ದಾಖಲಾಗದೇ, ಪ್ರೋತ್ಸಾಹಧನವೂ ಬಂದಿಲ್ಲ. ರಾಜ್ಯದಾದ್ಯಂತ ಬಾಕಿ ಇರುವ 3 ತಿಂಗಳ ಪ್ರೋತ್ಸಾಹಧನ ಕೂಡಲೇ ಬಿಡುಗಡೆಗೊಳಿಸಬೇಕು. ಮೊಬೈಲ್ ಆಧಾರಿತ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳಬಾರದು. ಇಲ್ಲದಿದ್ದರೆ ಮೊಬೈಲ್ ಆಧಾರಿತ ಕೆಲಸಗಳಿಗೆ ಪ್ರೋತ್ಸಾಹಧನ ನಿಗದಿಪಡಿಸಬೇಕು. ಪಶ್ಚಿಮ ಬಂಗಾಳದ ಮಾದರಿಯಲ್ಲಿ ಸೇವಾ ನಿವೃತ್ತಿ ಪಡೆಯುವ ಆಶಾ ಕಾರ್ಯಕರ್ತೆಯರಿಗೆ ವರ್ಷಕ್ಕೆ ರೂ.5 ಲಕ್ಷ ನೀಡಬೇಕು. ಪ್ರತಿವರ್ಷ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಸೌಲಭ್ಯ ಕಲ್ಪಿಸಬೇಕು. ನಮ್ಮನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಗ್ರಾಚ್ಯುಟಿ, ಭವಿಷ್ಯನಿಧಿ, ಕಾರ್ಮಿಕರ ರಾಜ್ಯ ವಿಮೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.