(ನ್ಯೂಸ್ ಕಡಬ) newskadaba.com ಜ.02 ನವದೆಹಲಿ: ಕುಸಾಲ್ ಪೆರೆರಾ ಅವರ ಟಿ20ಐ ಶತಕದ ಬಲದಿಂದ ಶ್ರೀಲಂಕಾ ತಂಡ ಮೂರನೇ ಹಾಗೂ ಟಿ20ಐ (SL vs NZ) ಸರಣಿಯ ಕೊನೆಯ ಪಂದ್ಯದಲ್ಲಿ 7 ರನ್‌ಗಳ ಗೆಲುವು ಪಡೆದಿದೆ. ಆ ಮೂಲಕ 2006ರ ಬಳಿಕ ಅಂದರೆ 17 ವರ್ಷಗಳ ನಂತರ ಇದೇ ಮೊದಲ ಬಾರಿ ನ್ಯೂಜಿಲೆಂಡ್‌ನಲ್ಲಿ ಶ್ರೀಲಂಕಾ ತಂಡ ಟಿ20ಐ ಪಂದ್ಯವನ್ನು ಗೆದ್ದಿದೆ. ಈ ಪಂದ್ಯದ ಸೋಲಿನ ಹೊರತಾಗಿಯೂ ಕಿವೀಸ್ ಟಿ20ಐ ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಶ್ರೀಲಂಕಾ ತಂಡ ಪವರ್‌ಪ್ಲೇನಲ್ಲಿ ತನ್ನ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ಕುಸಾಲ್ ಪೆರೆರಾ ಅವರು ಸ್ಪೋಟಕ ಬ್ಯಾಟ್ ಮಾಡಿ ಭರ್ಜರಿ ಶತಕವನ್ನು ಸಿಡಿಸಿದ್ದರು.ಇವರು ಎದುರಿಸಿದ ಕೇವಲ 44 ಎಸೆತಗಳಲ್ಲಿ ಸೆಂಚುರಿ ಬಾರಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಪೋಟಕ ಬ್ಯಾಟ್ ಮಾಡಿದ ಶ್ರೀಲಂಕಾ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಪೆರೆರಾ ಅವರ ಸ್ಪೋಟಕ ಇನಿಂಗ್ಸ್‌ನಲ್ಲಿ 4 ಸಿಕ್ಸರ್ ಹಾಗೂ 13 ಬೌಂಡರಿಗಳಿವೆ.
ಇವರಿಗೆ ಸಾಥ್ ನೀಡಿದ್ದ ಚರಿತಾ ಅಸಲಂಕ 46 ರನ್‌ಗಳನ್ನು ಕಲೆ ಹಾಕಿದರು. ಅಂತಿಮವಾಗಿ ಶ್ರೀಲಂಕಾ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 218 ರನ್‌ಗಳನ್ನು ಕಲೆ ಹಾಕಿತ್ತು. ಇದು ಶ್ರೀಲಂಕಾ ತಂಡದ ಎರಡನೇ ಗರಿಷ್ಠ ಮೊತ್ತವಾಗಿದೆ. ಸ್ಪೋಟಕ ಶತಕ ಸಿಡಿಸಿ ಬ್ಯಾಟ್ ಮಾಡುತ್ತಿದ್ದ ಪೆರೆರಾ ಅವರನ್ನು 19ನೇ ಓವರ್‌ನಲ್ಲಿ ಡ್ಯಾರಿಲ್ ಮಿಚೆಲ್ ಔಟ್ ಮಾಡಿದ್ದರು.