(ನ್ಯೂಸ್ ಕಡಬ) newskadaba.com ಜ.02 ಉಡುಪಿ: ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದ ಹಿಮಾಚಲ ಸರ್ಕಾರ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ವಿದ್ಯುತ್ ಸಬ್ಸಿಡಿಯನ್ನು ತ್ಯಜಿಸುವಂತೆ ಜನರಿಗೆ ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸುಖು ಮನವಿ ಮಾಡಿಕೊಂಡಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿರುವುದರಿಂದ ರಾಜ್ಯದಲ್ಲಿ ಹಣ ಉಳಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸುಖು ಅವರು ತಮ್ಮ ಹೆಸರಿನಲ್ಲಿ ನೋಂದಣಿಯಾಗಿದ್ದ ವಿದ್ಯುತ್ ಸಬ್ಸಿಡಿ ವಾಪಸ್ ನೀಡಿದ್ದಾರೆ. ಈ ಬಗ್ಗೆ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತರೆ ಅರ್ಹರಿಗೂ ವಿದ್ಯುತ್ ಸಬ್ಸಿಡಿ ಯೋಜನೆಯಿಂದ ಹಿಂದೆ ಸರಿಯುವಂತೆ ಕರೆ ನೀಡಿದ್ದಾರೆ. ಸುಖ್ವೀಂದರ್ ಸಿಂಗ್ ಸುಖು ಅವರು ಒಟ್ಟು ತಮ್ಮ ಹೆಸರಿನಲ್ಲಿ ನೋಂದಣಿಯಾಗಿದ್ದ 5 ವಿದ್ಯುತ್ ಸಂಪರ್ಕಗಳಿಗೆ ಸಿಗುತ್ತಿದ್ದ ಸಬ್ಸಿಡಿಯನ್ನು ಹಿಂದಿರುಗಿಸಿದ್ದಾರೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬಹುವಿದ್ಯುತ್ ಸಂಪರ್ಕವನ್ನು ಹೊಂದಿರುವ ಜನರು, ಸಬ್ಸಿಡಿಯನ್ನು ವಾಪಸ್ ನೀಡುವಂತೆ ಕೇಳಿಕೊಂಡಿದ್ದಾರೆ.
ಮುಂದುವರೆದು ಸರ್ಕಾರ ವಿದ್ಯುತ್ ಸಬ್ಸಿಡಿಗಾಗಿ ವಾರ್ಷಿಕ 2,200 ಕೋಟಿ ರೂ. ಖರ್ಚು ಮಾಡುತ್ತದೆ. ವಿದ್ಯುತ್ ಇಲಾಖೆಯ ನೌಕರರ ಸಂಬಳ ಮತ್ತು ಪಿಂಚಣಿಗಾಗಿ ತಿಂಗಳಿಗೆ 200 ಕೋಟಿ ರೂ. ಖರ್ಚು ಮಾಡುತ್ತಿದೆ. ಸಬ್ಸಿಡಿ ಅಗತ್ಯ ಇರುವವರಿಗೆ ಮೀಸಲು, ಅನುಕೂಲಸ್ಥರು ರಾಜ್ಯದ ಅಭಿವೃದ್ಧಿ ಕಾರಣಕ್ಕೆ ವಾಪಸ್ ನೀಡಬೇಕು ಎಂದು ಕೋರಿದ್ದಾರೆ.