(ನ್ಯೂಸ್ ಕಡಬ) newskadaba.com ಜ.02 ಉಡುಪಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ದೇವರ ದರ್ಶನಕ್ಕೆಂದು ದಾಂಧಲೆ ನಡೆಸಿ, ಮಠದ ಸಿಬ್ಬಂದಿ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ 8 ಮಂದಿ ಅಯ್ಯಪ್ಪ ಮಾಲಾಧಾರಿಗಳನ್ನು ಬಂಧನಕ್ಕೊಳಪಡಿಸಲಾಗಿದೆ.
ಡಿ.29 ರಂದು ರಾತ್ರಿ ಈ ಘಟನೆ ನಡೆದಿದ್ದು, ಹೈದರಬಾದಿನ ಶಿವಕುಮಾರ, ವಿಶಾಲ್, ರಾಜು, ನವೀನ್ ರಾಜ್, ರವಿಕಿರಣ್, ಭಾನು, ಉಮೆಂದರ್, ರವಿಕಾಂತ್ ಬಂಧಿತರು. ಶ್ರೀಕೃಷ್ಣಮಠದ ಒಳಗೆ ಹಾಗೂ ಹೊರಗೆ ತೀವ್ರ ಜನಸಂದಣಿಯಿಂದ ನೂಕು ನುಗ್ಗಲು ಉಂಟಾಗಿತ್ತು. ಈ ವೇಳೆ ದೇವರ ದರ್ಶನಕ್ಕೆಂದು ಬಂದಿದ್ದ ಸುಮಾರು 7-8 ಜನ ಅಯ್ಯಪ್ಪ ಮಾಲಾಧಾರಿಗಳು ದಾಂಧಲೆ ನಡೆಸಿದ್ದರು ಎನ್ನಲಾಗಿದೆ.
ರಥ ಬೀದಿಯಲ್ಲಿ ನಡೆಯುವ ರಥೋತ್ಸವದ ದೇವರ ಉತ್ಸವ ಮೂರ್ತಿ ಪಲ್ಲಕ್ಕಿಯೊಂದಿಗೆ ಕೃಷ್ಣಮಠದ ಮುಂಭಾಗದಿಂದ ಒಳಭಾಗಕ್ಕೆ ಬರುವ ವೇಳೆ ದಾಂಧಲೆ ನಡೆಸಿದ್ದರು. ಅಷ್ಟೇ ಅಲ್ಲದೆ, ಕೃಷ್ಣಮಠದ ಸಿಬ್ಬಂದಿ ಜಗದೀಶ ಎಂಬುವವರ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ.