(ನ್ಯೂಸ್ ಕಡಬ) newskadaba.com ಜ.02 ಹಾಸನ: ಮದುವೆಯಾಗಲು ನಿರಾಕರಿಸಿದ ಪ್ರಿಯಕರನಿಗೆ ಪ್ರೇಯಸಿಯೊಬ್ಬಳು ಚೂರಿ ಇರಿದ ಘಟನೆ ಬಿ.ಎಂ. ರಸ್ತೆಯ ಖಾಸಗಿ ಹೋಟೆಲ್ ಗೇಟ್‌ನಲ್ಲಿ ಹೊಸ ವರ್ಷದ ಹಿಂದಿನ ದಿನದ ತಡರಾತ್ರಿ ನಡೆದಿದೆ.
ಹಾಸನ ತಾಲೂಕಿನ ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ ಗಾಯಗೊಂಡ ಯುವಕನಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಭವಾನಿ ಎಂಬ ಯುವತಿ ಮನುಕುಮಾರ್ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಳು. ಈ ವೇಳೆ ಇಬ್ಬರಲ್ಲಿ ಪ್ರೀತಿ ಪ್ರೇಮ ಶುರುವಾಗಿದೆ. ಆದರೆ, ಕೆಲ ದಿನಗಳಿಂದ ಇಬ್ಬರೂ ಬೇರಾಗಿದ್ದರು. ಯಾವ ಕರೆ ಕೂಡ ಮಾಡಿರಲಿಲ್ಲ. ಮಂಗಳವಾರ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಖಾಸಗಿ ಹೋಟೆಲ್’ಗೆ ಬಂದಿದ್ದ ಮನುಕುಮಾರ್ ವಿಚಾರ ತಿಳಿದ ಯುವತಿ, ಆತನಿಗೆ ಫೋನ್ ಮಾಡಿದ್ದಾಳೆ. ಆದರೆ, ಮನುಕುಮಾರ್ ಫೋನ್ ತೆಗೆದಿಲ್ಲ.
ಬಳಿಕ ತಡರಾತ್ರಿ ಹೋಟೆಲ್ ಬಳಿ ಬಂದ ಭವಾನಿ ಅಲ್ಲೇ ಬಿದ್ದಿದ್ದ ಪಾಸ್ ಹಾಕಿಕೊಂಡು ಗೇಟ್ ಒಳಗೆ ಹೋಗಿದ್ದಾಳೆ. ಇದೇ ವೇಳೆ ಮನುಕುಮಾರ್ ಕೂಡ ಗೇಟ್ ಬಳಿ ಬಂದಿದ್ದು, ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ತಕ್ಷಣ ಜಗಳ ಬಿಡಿಸಲು ಸ್ನೇಹಿತರು ಮುಂದಾಗಿದ್ದರು. ನೋಡನೋಡುತ್ತಿದ್ದಂತೆಯೇ ಯುವತಿ ಮನುಕುಮಾರ್’ಗೆ ಚಾರಿಯಿಂದ ಇರಿದಿದ್ದಾಳೆ. ಕೂಡಲೇ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಆತನ ಸ್ಥಿತಿ ಗಂಭೀರವಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ. ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.