(ನ್ಯೂಸ್ ಕಡಬ) newskadaba.com ಜ.02 ಬೆಂಗಳೂರು: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆಯುತ್ತಿದ್ದರೂ ಭ್ರಷ್ಟಾಚಾರ ಹೆಚ್ಚುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.
ಹಿರಿಯ ಐಎಎಸ್, ಐಪಿಎಸ್, ಅರಣ್ಯ ಇಲಾಖೆ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಭ್ರಷ್ಟಾಚಾರ ತಡೆಯುವ ಬದಲು ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಭ್ರಷ್ಟಾಚಾರದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದ ಮುಖ್ಯಮಂತ್ರಿ, ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ. “ನಾವೆಲ್ಲರೂ ನಮ್ಮ ಆತ್ಮಸಾಕ್ಷಿಯಂತೆ ಕೆಲಸ ಮಾಡಿದರೆ, ನಾವು ಗುರಿಯನ್ನು ತಲುಪಬಹುದು ಅಥವಾ ಕನಿಷ್ಠ ಆ ದಿಕ್ಕಿನಲ್ಲಿ ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಬಹುದು ಎಂದರು.
ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಹಿರಿಯ ಅಧಿಕಾರಿಗಳ ಸಹಕಾರ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರತಿಯೊಬ್ಬರೂ ಬದ್ಧತೆಯಿಂದ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ಅಭಿವೃದ್ಧಿಗೆ ಸಮರ್ಪಕ ಅನುದಾನ ನೀಡುತ್ತಿಲ್ಲ ಎಂಬ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಹಿಂದಿನ ಬಿಜೆಪಿ ಸರಕಾರ ಬಜೆಟ್‌ನಲ್ಲಿ ಹಣ ಮೀಸಲಿಡದೆ 2,09,000 ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ನೀಡಿದ್ದರಿಂದ ಹೊಸ ಕಾಮಗಾರಿಗಳಿಗೆ ತಮ್ಮ ಬಳಿ ಹಣವಿಲ್ಲ ಎಂದು ಸಿಎಂ ಸ್ಪಷ್ಟ ಪಡಿಸಿದರು. ಟೆಂಡರ್ ಕರೆದು ಏಜೆನ್ಸಿಗಳನ್ನು ನಿಗದಿಪಡಿಸಿ ಹಣ ಮಂಜೂರು ಮಾಡದೆ ಕಾಮಗಾರಿ ಆರಂಭಿಸಿದ್ದಾರೆ, ಇದರಿಂದಾಗಿ 29,000 ಕೋಟಿ ಬಿಲ್ ಬಾಕಿ ಉಳಿದಿದ್ದು ಇದಕ್ಕೆ ಪ್ರಮುಖ ಕಾರಣ ಎಂದು ಸಿದ್ದರಾಮಯ್ಯ ಹೇಳಿದರು.