(ನ್ಯೂಸ್ ಕಡಬ) newskadaba.com ಜ.02: ಮಣಿಪುರ ಸಿಎಂ ಬಿರೇನ್ ಸಿಂಗ್ ಅವರು ಕೇವಲ ಕ್ಷಮೆ ಕೋರಿದರೆ ಸಾಲುವುದಿಲ್ಲ. ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಅಶೋಕ್ ಗೆಹಲೋತ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಣಿಪುರ ಸಿಎಂ ಜನತೆಯ ಕ್ಷಮೆಯಾಚಿಸಿದ್ದಾರೆ ಅಂದ ಮಾತ್ರಕ್ಕೆ ಅವರು ಮಾಡಿದ ತಪ್ಪನ್ನು ಮರೆಯಲಾಗದು. ಮಣಿಪುರದಲ್ಲಿ ನಡೆದಿರುವುದು ದೇಶದ ಇತಿಹಾಸದಲ್ಲಿ ಬೇರೆ ಯಾವುದೇ ರಾಜ್ಯದಲ್ಲಿ ನಡೆದಿಲ್ಲ. ಆದರೆ, ಕೇಂದ್ರ ಸರ್ಕಾರ ಏನನ್ನೂ ಮಾಡಲಿಲ್ಲ. ಪ್ರಧಾನಿ ಮೋದಿ ಅವರು ಮಣಿಪುರಕ್ಕೆ ಭೇಟಿ ಕೂಡ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಸಮಯದಲ್ಲಿ ಪ್ರಧಾನಿ ಮೋದಿ ಅವರು ತಟ್ಟೆಗಳನ್ನು ಬಡಿಯಲು ಕರೆ ನೀಡಿದ್ದರು. ಅವರ ಮಾತನ್ನು ಜನರು ಕೇಳಿದ್ದರು. ಅದೇ ರೀತಿ ಅವರು ಮಣಿಪುರಕ್ಕೆ ಭೇಟಿ ನೀಡಿ ಶಾಂತಿಯ ಕರೆ ನೀಡಿದ್ದರೆ, ಬಹುಶಃ ಕಾದಾಡುತ್ತಿರುವ ಎರಡು ಸಮುದಾಯಗಳಿಗೆ ಸೇರಿದ ಜನರು ಕೂಡ ಅವರ ಮಾತನ್ನು ಕೇಳುತ್ತಿದ್ದರು. ಆದರೆ, ಪ್ರಧಾನಿ ಮೋದಿ ಅವರು ಮಣಿಪುರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಹೇಳಿದರು. ಇನ್ನು ಮಣಿಪುರದಲ್ಲಿ ಕಂಡುಬಂದ ಜನಾಂಗೀಯ ಸಂಘರ್ಷ ಕುರಿತಂತೆ ಸಿಎಂ ಎನ್.ಬಿರೇನ್ ಸಿಂಗ್ ಮಂಗಳವಾರ ಕ್ಷಮೆಯಾಚಿಸಿದ್ದರು. ರಾಜ್ಯದಲ್ಲಿ ಏನು ಸಂಭವಿಸಿದೆಯೋ ಅದಕ್ಕಾಗಿ ನಾನು ಕ್ಷಮೆ ಕೋರಲು ಬಯಸುತ್ತೇನೆ. ಹಲವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದರೆ, ನೂರಾರು ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು. ಎಲ್ಲ ಸಮುದಾಯಗಳು ಈ ಹಿಂದಿನ ತಪ್ಪುಗಳನ್ನು ಮರೆಯಬೇಕು ಹಾಗೂ ಕ್ಷಮಿಸಬೇಕು ಎಂದು ಜನತೆಯಲ್ಲಿ ಕೇಳಿಕೊಂಡಿದ್ದರು.