(ನ್ಯೂಸ್ ಕಡಬ) newskadaba.com ಜ.01: ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಂಕೊಳಿಗೆ ಸಮೀಪ ಡಿ. ೩೧ರ ತಡರಾತ್ರಿ ಸಂಭವಿಸಿದೆ.
ನಾಟೆಕಲ್ ಪನೀರ್ ನಿವಾಸಿ ಉಮ್ಮರ್ ಫಾರೂಕ್ ಯಾನೆ ಅಝರ್(33) ಮೃತ ಸ್ಕೂಟರ್ ಸವಾರ. ಅಝರ್ ಅವರು ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಮಂಗಳವಾರ ರಾತ್ರಿ ತಲಪಾಡಿಗೆ ಫುಡ್ ಡೆಲಿವರಿ ತಲುಪಿಸಿ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ಅಝರ್ ಅವರ ಮೇಲೆ ಲಾರಿಯ ಹಿಂಬದಿ ಚಕ್ರ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಝರ್ ಅವರ ಮೃತದೇಹವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಕಾರಣವಾದ ಲಾರಿಯನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.