(ನ್ಯೂಸ್ ಕಡಬ) newskadaba.com ಜ.01 ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಡಿ ಕೈಗೊಂಡಿರುವ ವಿವಿಧ ವಸತಿ ಯೋಜನೆಗಳ ಮೇಲಿನ ಶೇ 18ರಷ್ಟು ಜಿಎಸ್‌ಟಿಯನ್ನು ತೆಗೆದುಹಾಕುವಂತೆ ಕೋರಿ ರಾಜ್ಯ ಸರ್ಕಾರ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ದೆಹಲಿಯಲ್ಲಿನ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಈ ಕುರಿತು ವಸತಿ ಸಚಿವ ಜಮೀರ್ ಅಹಮದ್ ಜಯಚಂದ್ರ ಅವರಿಗೆ ಮನವಿ ಸಲ್ಲಿಸಿದ ವಸತಿ ಯೋಜನೆಗಳ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಜಯಚಂದ್ರ, ಶೇ.18ರಷ್ಟು ಜಿಎಸ್‌ಟಿ ಜಾರಿಯಾಗಿರುವುದರಿಂದ ಫಲಾನುಭವಿಗಳು ಮನೆ ನಿರ್ಮಾಣಕ್ಕೆ 1.5 ಲಕ್ಷ ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗಿದ್ದು, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಹೊರೆಯಾಗಿದೆ ಎಂದರು. ರಾಜ್ಯದಲ್ಲಿ 2,865 ಕೊಳೆಗೇರಿಗಳಿದ್ದು, ಅದರಲ್ಲಿ 635 ಬೆಂಗಳೂರಿನಲ್ಲಿವೆ. ಈ ಕೊಳೆಗೇರಿಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ 3,682 ಕೋಟಿ ರೂಪಾಯಿ ಕೇಳಿ ಪ್ರಸ್ತಾವನೆ ಸಲ್ಲಿಸಿದೆ.
ಈ ಪರಿಶೀಲನಾ ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಲು ನಿರ್ಧರಿಸಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 45,124 ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಅದರಲ್ಲಿ 8,287 ಮನೆಗಳನ್ನು ಪೂರ್ಣಗೊಳಿಸಿದ್ದೇವೆ, 31,626 ಮನೆಗಳು ನಿರ್ಮಾಣ ಹಂತದಲ್ಲಿವೆ ಎಂದರು.