(ನ್ಯೂಸ್ ಕಡಬ) newskadaba.com ಜ1 ಬೆಂಗಳೂರು: ಸರ್ಕಾರಿ ಆಸ್ಪತ್ರೆ ಆವರಣದ ಒಳಗೆ ಹಾಗೂ ಹೊರಗೆ ಬೀದಿ ನಾಯಿಗಳು-ಜಾನುವಾರುಗಳು ಪ್ರವೇಶಿಸದಂತೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿದೆ.
ಆಸ್ಪತ್ರೆಗಳ ಒಳಗೆ ಹಾಗೂ ಆವರಣಗಳನ್ನು ಪ್ರವೇಶಿಸುವ ಬೀದಿ ನಾಯಿಗಳು, ಒಳ ರೋಗಿ, ಹೊರ ರೋಗಿ, ಗರ್ಭಿಣಿಯರು, ತಾಯಿ–ಮಕ್ಕಳಿಗೆ ಅಪಾಯ ಉಂಟುಮಾಡುತ್ತಿರುವುದು ಕೆಲವೆಡೆ ವರದಿಯಾಗುತ್ತಿದೆ. ಆರೋಗ್ಯ ಸಂಸ್ಥೆಗಳು ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿದ್ದು, ಆಸ್ಪತ್ರೆಗಳಲ್ಲಿ ಸೋಂಕು ತಡೆಗಟ್ಟಲು ಹಾಗೂ ಸಾರ್ವಜನಿಕರಿಗೆ ಉಂಟಾಗಬಹುದಾದ ಸಂಭವನೀಯ ಅಪಾಯ ತಡೆಗಟ್ಟಲು ಜಾನುವಾರು ಮತ್ತು ಬೀದಿ ನಾಯಿಗಳಿಗೆ ಪ್ರವೇಶ ನಿರ್ಬಂಧಿಸುವ ಅವಶ್ಯಕತೆಯಿದೆ ಎಂದು ತಿಳಿಸಲಾಗಿದೆ.
ಆಸ್ಪತ್ರೆಗಳಲ್ಲಿ ವೈದ್ಯಕೀಯ ತ್ಯಾಜ್ಯ ಮತ್ತು ಆಹಾರ ಪದಾರ್ಥಗಳ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಿಸದೆ ಇರುವುದೇ ಬೀದಿ ನಾಯಿಗಳು ಆಸ್ಪತ್ರೆಗಳ ಆವರಣ ಪ್ರವೇಶಿಸುವುದಕ್ಕೆ ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಆರೋಗ್ಯ ಸಂಸ್ಥೆಗಳ ಆಡಳಿತ ಮುಖ್ಯಸ್ಥರು ಅಗತ್ಯ ಕ್ರಮವಹಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಎಚ್ಚರಿಸಲಾಗಿದೆ. ಜಾನುವಾರುಗಳು ಹಾಗೂ ಬೀದಿ ನಾಯಿಗಳು ಪ್ರವೇಶಿಸದಂತೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಒಂದು ವಾರದೊಳಗೆ ವರದಿ ಸಲ್ಲಿಸುವಂತೆಯೂ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.