(ನ್ಯೂಸ್ ಕಡಬ) newskadaba.com ಡಿ.30: ಆಮ್ ಆದ್ಮಿ ಪಕ್ಷ ಗೆದ್ದರೆ ದೆಹಲಿಯ ದೇವಸ್ಥಾನಗಳಲ್ಲಿನ ಅರ್ಚಕರಿಗೆ ಪ್ರತಿ ತಿಂಗಳಿಗೆ 18,000 ರೂ. ಸಹಾಯಧನ ನೀಡುವುದಾಗಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ, ದೇವಸ್ಥಾನಗಳಲ್ಲಿ ಕೆಲಸ ಮಾಡುವ ಎಲ್ಲಾ ಅರ್ಚಕರು ಮತ್ತು ನಗರದಾದ್ಯಂತ ಗುರುದ್ವಾರಗಳಲ್ಲಿ ಗ್ರಂಥಿಗಳಿಗೆ ತಿಂಗಳಿಗೆ 18,000 ರೂಪಾಯಿ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಹಿಂದೂ ದೇವಸ್ಥಾನ ಮತ್ತು ಗುರುದ್ವಾರಗಳಲ್ಲಿ ಪೂಜೆ ಮಾಡುವವರಿಗೆ ಪೂಜಾರಿ ಗ್ರಂಥಿ ಸಮ್ಮಾನ್ ಯೋಜನೆ ಹೆಸರಿನಲ್ಲಿ ಸಹಾಯಧನ ನೀಡುವುದಾಗಿ ಭರವಸೆ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪುರೋಹಿತರು ಮತ್ತು ಗ್ರಂಥಿಗಳು ನಮ್ಮ ಧಾರ್ಮಿಕ ಪದ್ಧತಿಗಳ ಪಾಲಕರಾಗಿದ್ದಾರೆ, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ದುರದೃಷ್ಟವಶಾತ್ ಅವರ ಆರ್ಥಿಕ ಯೋಗಕ್ಷೇಮದ ಬಗ್ಗೆ ಯಾರೂ ಕಾಳಜಿ ವಹಿಸಿಲ್ಲ, ಇದಕ್ಕಾಗಿ ನಾವು ಈ ಯೋಜನೆಯನ್ನು ಪರಿಚಯಿಸುತ್ತಿದ್ದೇವೆ ಎಂದು ತಿಳಿಸಿದರು.
ಮಂಗಳವಾರ ಕನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ದೇವಸ್ಥಾನದಿಂದ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು. ನೋಂದಣಿ ಪ್ರಕ್ರಿಯೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸಬೇಡಿ ಎಂದು ನಾನು ಬಿಜೆಪಿಯನ್ನು ವಿನಂತಿಸುತ್ತೇನೆ, ಇದನ್ನು ತಡೆಯುವುದು ಪಾಪ ಮಾಡಿದಂತೆ ಆಗುತ್ತದೆ ಕಾರಣ ಅವರು ದೇವರಿಗೆ ನಮ್ಮ ನಡುವೆ ಸೇತುವೆಯಾಗಿದ್ದಾರೆ ಎಂದರು.