(ನ್ಯೂಸ್ ಕಡಬ) newskadaba.com ಡಿ.30: ಬೆಂಗಳೂರು: ಗುತ್ತಿಗೆದಾರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಬಿಜೆಪಿಯವರು ಮಾಡಿರುವ ಆರೋಪ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ಮೇಲೆ ಅನವಶ್ಯಕವಾಗಿ ಆಪಾದನೆ ಮಾಡುವುದು ಯಾವುದೇ ಸರ್ಕಾರಕ್ಕು ಸರಿ ಇರುವುದಿಲ್ಲ. ಡೆತ್‌ನೋಟ್‌ನಲ್ಲಿ ಅವರ ಹೆಸರು ಕೂಡ ಇಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.ಸಚಿವರ ಹೆಸರನ್ನು ತಂದು, ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಸತ್ಯಾಸತ್ಯತೆ ಹೊರಬರಲಿ ಎಂಬ ದೃಷ್ಟಿಯಿಂದ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಸಿಐಡಿಗೆ ವಹಿಸಲಾಗಿದೆ ಎಂದು ಹೇಳಿದರು.
ತನಿಖೆಯ ವರದಿ ಬಂದ ನಂತರ ಏನು ಎಂಬುದನ್ನು ಹೇಳೋಣ. ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಕೊಡುವ ಅಗತ್ಯ ಇಲ್ಲ. ಅನವಶ್ಯಕವಾಗಿ ಅವರ ಹೆಸರನ್ನು ತೆಗೆದುಕೊಂಡು ರಾಜೀನಾಮೆ ಕೊಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದರು ಸಿಬಿಐಗೆ ವಹಿಸುವಂತೆ ಬಿಜೆಪಿಯವರು ಒತ್ತಾಯಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಪ್ರಕರಣಗಳನ್ನು ಸಿಬಿಐಗೆ ವಹಿಸಲು ಆಗುವುದಿಲ್ಲ. ಸಿಐಡಿ ಸಮರ್ಥವಾಗಿದೆ. ಅನವಶ್ಯಕವಾಗಿ ಎಲ್ಲದರಲ್ಲು ರಾಜಕೀಯ ಮಾಡಲು ಹೋದರೆ ಕೇಳುವುದಿಲ್ಲ ಎಂದರು.