(ನ್ಯೂಸ್ ಕಡಬ) newskadaba.com ಡಿ. 23 ನವದೆಹಲಿ: ಕಳೆದ ಒಂದೂವರೆ ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಅಂದರೆ ಸುಮಾರು 10 ಲಕ್ಷ ಖಾಯಂ ಸರ್ಕಾರಿ ನೌಕರಿಯನ್ನು ಯುವ ಜನತೆಗೆ ಒದಗಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ರೋಜ್ ಗಾರ್ ಮೇಳದಲ್ಲಿ ನೇಮಕಾತಿಯಾದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂತಹ ಕಾರ್ಯಕ್ರಮದ ಮೂಲಕ ಇಷ್ಟೊಂದು ದಾಖಲೆ ಪ್ರಮಾಣದಲ್ಲಿ ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಉದ್ಯೋಗ ನೀಡಿರಲಿಲ್ಲ ಎಂದು ಹೇಳಿದರು. ಈ ರೋಜ್ ಗಾರ್ ಮೇಳದಲ್ಲಿ 71,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ಕೇಂದ್ರ ಸರ್ಕಾರದ ನೀತಿಗಳು, ಕಾರ್ಯಕ್ರಮಗಳಲ್ಲಿ ಯುವ ಜನತೆಗೆ ಆದ್ಯತೆ ನೀಡಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಸ್ವಾವಲಂಬಿಯನ್ನಾಗಿಸುವುದು ಸರ್ಕಾರದ ಪ್ರಯತ್ನವಾಗಿದೆ ಎಂದರು.