(ನ್ಯೂಸ್ ಕಡಬ) newskadaba.com ಡಿ. 19 ಮಂಗಳೂರು : ಅಡುಗೆ ಮನೆಯ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡ ಘಟನೆ ತಡಂಬೈಲ್ ವೆಂಕಟರಮಣ ಕಾಲನಿಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಮನೆಯ ಯಜಮಾನ ವಾಮನ ಅವರ ಪತ್ನಿ ವಸಂತಿ (68) ಮತ್ತು ವಾಮನ ಅವರ ಅಕ್ಕ ಪುಷ್ಪಾ (72) ಗಾಯಾಳುಗಳು. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಸಂತಿ ಅವರು ಗ್ಯಾಸ್ ಸೋರಿಕೆಯಾಗಿರುವುದನ್ನು ಗಮನಿಸದೆ ಮಧ್ಯಾಹ್ನ ಅಡುಗೆ ಕೋಣೆಗೆ ಹೋಗಿ ಸ್ಟವ್‌ಗೆ ಬೆಂಕಿ ಹಚ್ಚಿದ್ದಾರೆ. ಅನಿಲ ಸೋರಿಕೆಯಾಗಿದ್ದರಿಂದ ಬೆಂಕಿ ಏಕಾಏಕಿ ವ್ಯಾಪಿಸಿಕೊಂಡಿದೆ. ವಸಂತಿ ಅವರು ಹಾಯಕ್ಕಾಗಿ ಕೂಗಿದಾಗ ಹೊರಗೆ ಬಟ್ಟೆ ಒಗೆಯುತ್ತಿದ್ದ ಪುಷ್ಪಾ ಧಾವಿಸಿ ಬಂದು ಹೊರಗಿನಿಂದ ಬಾಗಿಲು ತೆರೆಯುತ್ತಿದ್ದಂತೆ ಅವರಿಗೂ ಬೆಂಕಿ ಹೊತ್ತಿಕೊಂಡಿದೆ. ಅವರಿಬ್ಬರ ಕೂಗಾಟ ಕೇಳಿ ಅಕ್ಕಪಕ್ಕದವರು ಧಾವಿಸಿ ಇಬ್ಬರನ್ನೂ ಹೊರಗೆಳೆದು ಬೆಂಕಿ ನಂದಿಸಲು ಸಹಕರಿಸಿದ್ದಾರೆ.
ವಸಂತಿ ಅವರು ಉಟ್ಟಿದ್ದ ಸೀರೆ ಅವರ ಮೈಗೆ ಅಂಟಿಕೊಂಡಿತ್ತು. ಬಳಿಕ ಸೀರೆಯನ್ನು ಕತ್ತರಿಸಿ ತೆಗೆಯಬೇಕಾಯಿತು. ಅದಾಗಲೇ ಕೈ, ಮುಖದ ಭಾಗ ಮತ್ತಿತರ ಕಡೆ ಬೆಂಕಿ ತಗುಲಿತ್ತು ಎಂದು ನೆರವಿಗೆ ಧಾವಿಸಿದವರು ಹೇಳಿದ್ದಾರೆ.