ಮಕ್ಕಳ ಕಾನೂನುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚನೆ

(ನ್ಯೂಸ್ ಕಡಬ) newskadaba.com ಡಿ. 19. ಮಕ್ಕಳ ಸಂರಕ್ಷಣೆಗಾಗಿ ಜಾರಿಯಾದ ಕಾಯಿದೆಗಳು ಕೇವಲ ಅಧಿಕಾರಿಗಳ ತರಬೇತಿ, ಕಾರ್ಯಾಗಾರ, ಸಭೆಗಳಿಗೆ ಮಾತ್ರ ಸೀಮಿತವಾಗದೆ ಕಾರ್ಯರೂಪಕ್ಕೆ ತರುವಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ಸ್ವ-ಇಚ್ಚೆಯಿಂದ ಕೆಲಸ ಮಾಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಡಾ. ತಿಪ್ಪೇಸ್ವಾಮಿ ಕೆ.ಟಿ ತಿಳಿಸಿದ್ದಾರೆ.

Nk Cake House

ಅವರು ಸೋಮವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಂಬಂಧಿಸಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಕ್ಕಳ ರಕ್ಷಣೆಯ ಕಾಯಿದೆಯ ಕುರಿತು ಅರಿವು ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳನ್ನು ಮಕ್ಕಳಾಗಿ ಬೆಳೆಯುವಲ್ಲಿ ಸಹಕರಿಸಬೇಕು. ಯಾವುದೇ ಕಾಯಿದೆಗಳು ಅನುಷ್ಠಾನದ ನಂತರ ಕಾರ್ಯರೂಪಕ್ಕೆ ಬಂದಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು, ತಮ್ಮ ವ್ಯಾಪ್ತಿಯಲ್ಲಿರುವ ಹಾಸ್ಟೆಲ್‍ ಗಳಿಗೆ ಆಗಿಂದಾಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ, ಮಕ್ಕಳ ಸಮಸ್ಯೆ, ಕುಂದು ಕೊರತೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

Also Read  ಮಂಗಳೂರು :ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಮೇಲೆ ತಲವಾರಿನಿಂದ ಹಲ್ಲೆ

ಸರಕಾರಿ ಆಸ್ಪತ್ರೆಗಳಲ್ಲಿ ಭ್ರೂಣ ಹತ್ಯೆ ಮಾಡಲು ಅವಕಾಶ ಇಲ್ಲದೇ ಇರುವುದರಿಂದ, ಖಾಸಗಿ ಆಸ್ಪತ್ರೆ, ಲ್ಯಾಬ್‍ ಗಳಿಗೆ ಹೆಚ್ಚಾಗಿ ಹೋಗುತ್ತಾರೆ ಅದ್ದರಿಂದ ಎಲ್ಲಾ ಖಾಸಗಿ ಆಸ್ಪತ್ರೆ, ಲ್ಯಾಬ್, ಕ್ಲಿನಿಕ್‍ ಗಳಿಗೆ ಬ್ರೂಣ ಹತ್ಯೆ ಕಾಯಿದೆಗಳ ಬಗ್ಗೆ ನಿಯಮಗಳ ಬಗ್ಗೆ ಮಾಹಿತಿ ನೀಡಬೇಕು. ಅಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕು. ಬಾಲ್ಯವಿವಾಹ, ಭ್ರೂಣಹತ್ಯೆ, ಅಪೌಷ್ಠಿಕತೆ, ಬಾಲಕಾರ್ಮಿಕತನ, ಮಕ್ಕಳ ಆತ್ಮಹತ್ಯೆ ಇಂತಹ ಹಲವಾರು ಸಮಸ್ಯೆಗಳ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಸರಕಾರಿ ಕೆಲಸದಲ್ಲಿರುವ ಅಧಿಕಾರಿಗಳು ತಮ್ಮ ಅಧಿಕಾರವನ್ನು ಬಳಸಿಕೊಂಡು, ತಮ್ಮ ಕೆಲಸದ ಸಮಯದಲ್ಲಿ ನಿಷ್ಟೆಯಿಂದ, ಮಾನವೀಯತೆ ದೃಷ್ಠಿಯಿಂದ ಕೆಲಸ ಮಾಡಬೇಕು. ಸರಕಾರದಿಂದ ಇರುವ ಕಾಯಿದೆಗಳು, ಸೌಲಭ್ಯಗಳು ಜನರಿಗೆ ನಿಸ್ವಾರ್ಥವಾಗಿ ತಲುಪಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ತಮ್ಮ ವ್ಯಾಪ್ತಿಯ ಮಕ್ಕಳ ಬಗ್ಗೆ ಗಮನಹರಿಸಬೇಕು ಎಂದು ತಿಪ್ಪೇಸ್ವಾಮಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ ಮಾತನಾಡಿ ಮಕ್ಕಳ ಸಂರಕ್ಷಣೆಯಲ್ಲಿ ಸರಕಾರಿ ಇಲಾಖೆಗಳ ಪಾತ್ರ ಇದೆ. ಮಗು ಹುಟ್ಟಿದಾಗಿನಿಂದ ಅದರ ಆರೋಗ್ಯ ಬಗ್ಗೆ ಗಮನಹರಿಸಲು ಆರೋಗ್ಯ ಇಲಾಖೆ, ಮಕ್ಕಳ ಸರ್ವತೋಮುಖ ಜ್ಞಾನದ ಬೆಳವಣಿಗೆಗೆ ಶಿಕ್ಷಣ ಇಲಾಖೆ, ಮಗುವಿನ ಆರೋಗ್ಯದ ದೈಹಿಕ, ಮಾನಸಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಶಿಕ್ಷಣ, ಆರೋಗ್ಯ ಇಲಾಖೆಗಳು ಜಂಟಿಯಾಗಿ ಕೆಲಸ ಮಾಡುತ್ತಿದೆ, ಬಾಲಕಾರ್ಮಿಕತೆಯನ್ನು ನಿರ್ಮೂಲನೆ ಮಾಡುವಲ್ಲಿ ಕಾರ್ಮಿಕ ಇಲಾಖೆಯ ಪಾತ್ರ ಮುಖ್ಯವಾಗಿದೆ ಎಂದರು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಶ್ಮಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ ಕೃಷ್ಣ ನಿರೂಪಿಸಿದರು.

error: Content is protected !!
Scroll to Top