(ನ್ಯೂಸ್ ಕಡಬ) newskadaba.com ಡಿ. 18ಜಮ್ಮು & ಕಾಶ್ಮೀರ್: ಜಮ್ಮು-ಕಾಶ್ಮೀರದ ಲಡಾಖ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಳಗಾವಿ ಮೂಲದ ಯೋಧರೊಬ್ಬರು ಗುಡ್ಡ ಕುಸಿತದಿಂದ ಡಿ. 14ರಂದು ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಇರಣಟ್ಟಿ ಗ್ರಾಮದ ಮಹೇಶ್ ಅವರು ಗುಡ್ಡ ಕುಸಿದು ಸಾವನ್ನಪ್ಪಿದ್ದಾರೆ. ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದರು.
ಸೈನಿಕ ಮಹೇಶ್ ಅವರ ಪಾರ್ಥಿವ ಶರೀರ ಡಿಸೆಂಬರ್ 17ರಂದು ಸಂಜೆ ಇರಣಟ್ಟಿ ಗ್ರಾಮಕ್ಕೆ ಆಗಮಿಸಿತು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಗೌರವ ಸಮರ್ಪಿಸಿದರು. ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಿನಲ್ಲಿ ಮಹೇಶ್ ಅವರ ಅಂತ್ಯಸಂಸ್ಕಾರ ನೆರವೇರಿತು. ಎರಡು ತಿಂಗಳ ಹಿಂದೆಯಷ್ಟೇ ಸೈನಿಕ ಮಹೇಶ್ ಅವರ ನಿಶ್ಚಿತಾರ್ಥ ಕೂಡ ಆಗಿದ್ದು, ಮದುವೆ ದಿನಾಂಕ ಕೂಡ ನಿಗದಿಯಾಗಿತ್ತು. ಆದರೆ ಇದೀಗ ಲಡಾಖ್‌ನಲ್ಲಿ ಸಂಭವಿಸಿದ ದುರಂತದಲ್ಲಿ ಮಹೇಶ್ ಕೊನೆಯುಸಿರೆಳೆದಿದ್ದಾರೆ.