(ನ್ಯೂಸ್ ಕಡಬ) newskadaba.com .ಡಿ. 11. ಕಾರ್ಕಳ: ಕುದುರೆಮುಖ ರಕ್ಷಿತಾರಣ್ಯ ಪ್ರದೇಶದಲ್ಲಿ ಕಡವೆ ಜಾತಿಯ ವನ್ಯಪ್ರಾಣಿಯನ್ನು ಗುಂಡುಹಾರಿಸಿ ಹತ್ಯೆಗೈದಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಹತ್ಯೆಗೀಡಾದ ಭಾರೀ ಗಾತ್ರದ ಕಡವೆಯನ್ನು ಹೊತ್ತು ತಂದ ತಂಡದಲ್ಲಿ ಹತ್ತು ಮಂದಿ ಭಾಗಿಯಾಗಿದ್ದು, ಇಬ್ಬರ ವಿರುದ್ಧ ಮಾತ್ರ ಕೇಸು ದಾಖಲಾಗಿರುವ ಬಗ್ಗೆ ಆರೋಪ ಕೇಳಿ ಬರುತ್ತಿವೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಹೌತೊಟ್ಟು ಎಂಬಲ್ಲಿ ಅಕ್ಟೋಬರ್ ೨28ರಂದು ಈ ಘಟನೆ ನಡೆದಿತ್ತು.ಪ್ರಕರಣದಲ್ಲಿ ಒಂದನೇ ಆರೋಪಿ ಎಂದು ದಾಖಲಾಗಿರುವ ಸಂದೇಶ್ ಪೂಜಾರಿಯ ಮನೆಯಲ್ಲಿ ಕಡವೆ ಜಾತಿಯ ವನ್ಯಪ್ರಾಣಿಯ ಮಾಂಸ ತಯಾರಿಸಲಾಗಿದ್ದು, ಅದನ್ನು ರಾಧಾಕೃಷ್ಣ ಪೂಜಾರಿಯ ಕೋಳಿ ಅಂಗಡಿಯಲ್ಲಿ ಮಾರಾಟ ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಕೆ.ಜಿ.ವೊಂದಕ್ಕೆ ೧೦೦೦ದಂತೆ ಮಾರಾಟ ಮಾಡಿರುವ ವಿಚಾರದಲ್ಲಿ ಸ್ಥಳೀಯರಲ್ಲಿ ಉಂಟಾದ ಜಗಳವು ಕಡವೆ ಜಾತಿಯ ವನ್ಯಪ್ರಾಣಿಯ ಹತ್ಯೆ ಪ್ರಕರಣ ಬೆಳಕಿಗೆ ಬರಲು ಕಾರಣವೆನ್ನಲಾಗಿದೆ. ಈ ಕುರಿತು ಮಂಗಳೂರು ಅರಣ್ಯ ಸಂಚಾರಿದಳಕ್ಕೆ ಬಂದಿದ್ದ ಖಚಿತ ಮಾಹಿತಿಯನ್ವಯ ಕಾರ್ಯಚರಣೆ ನಡೆದಿದೆ. ವೇಣೂರು ಅರಣ್ಯಧಿಕಾರಿ ಸುಬ್ರಹ್ಮಣ್ಯ ಆಚಾರ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದ್ದರು. ಸಂದೇಶ್ ಪೂಜಾರಿ, ರಾಧಾಕೃಷ್ಣ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದ್ದರೂ, ಅವರಿಬ್ಬರು ತಲೆ ಮರೆಸಿಕೊಂಡಿದ್ದಾರೆ.