(ನ್ಯೂಸ್ ಕಡಬ) newskadaba.com ಡಿ. 11. ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ವಿಶೇಷವಾಗಿ ರಾಜಧಾನಿ ಬೆಂಗಳೂರಿನ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮನವಿ ಮಾಡಿದರು.
ಮಂಗಳವಾರ ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿದ ಅವರು, ಆಲಮಟ್ಟಿ, ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿಯೂ ಅವರ ಕೊಡುಗೆ ಅಪಾರವಿದೆ. ಮಹಾರಾಷ್ಟ್ರದಿಂದ ನಿಪ್ಪಾಣಿ ಭಾಗಕ್ಕೆ 3 ಟಿಎಂಸಿ ನೀರು ತರುವ ನಿಟ್ಟಿನಲ್ಲಿ ಎಸ್.ಎಂ.ಕೃಷ್ಣ ಮಾಡಿದ ಪ್ರಯತ್ನ ಶ್ಲಾಘನೀಯವಾದದ್ದು. ಎಸ್.ಎಂ.ಕೃಷ್ಣ ಅವರ ನೆನಪು ಸದಾ ಹಸಿರಾಗಿರಲು ಆಲಮಟ್ಟಿ ಬಳಿ ಅವರ ಹೆಸರಿನಲ್ಲಿ ಸ್ಮಾರಕವನ್ನು ನಿರ್ಮಿಸಬೇಕು ಎಂದು ಹೇಳಿದರು.