ಗೃಹರಕ್ಷಕರು ಸಮರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಾರೆ – ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಉದ್ಘಾಟಿಸಿ ಡಾ.ಸಂತೋಷ್ ಕುಮಾರ್

(ನ್ಯೂಸ್ ಕಡಬ) newskadaba.com ಡಿ. 10. ಗೃಹರಕ್ಷಕರು ಸಮಾಜ ಸುಧಾರಣೆಗೆ ಸಮರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಸಮಾಜದಲ್ಲಿ ಅವರಿಗೆ ವಿಶೇಷ ಗೌರವ ಇದೆ ಎಂದು ದ.ಕ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಹೇಳಿದರು. ಅವರು ದ.ಕ ಜಿಲ್ಲಾ ಗೃಹರಕ್ಷಕ ದಳ ವತಿಯಿಂದ ಮೇರಿಹಿಲ್‌ನ ಗೃಹರಕ್ಷಕ ದಳ ಕಚೇರಿಯಲ್ಲಿ ಜರಗಿದ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ವಾಹನ ಸಂಚಾರ ನಿರ್ವಹಣೆ, ಸಾರ್ವಜನಿಕರ ನಡುವಿನ ಗೊಂದಲ ನಿವಾರಣೆ, ಶಾಂತಿ ಸುವ್ಯವಸ್ಥೆಗೆ ಸಂಬಂಧಿಸಿದ ಕರ್ತವ್ಯಗಳ ಜೊತೆಗೆ ಸಮಾಜದಲ್ಲಿ ಶಿಸ್ತನ್ನು ತಂದು ಅನಾಗರಿಕರನ್ನು ನಾಗರಿಕರನ್ನಾಗಿಸುವ ಕೆಲಸವನ್ನು ಗೃಹರಕ್ಷಕರು ಮಾಡುತ್ತಿದ್ದಾರೆ. ಹಾಗಾಗಿ ಖಾಕಿ ಮೇಲೆ ವಿಶೇಷ ಗೌರವ ಹೊಂದಿದ್ದೇನೆ ಎಂದು ಡಾ. ಸಂತೋಷ್ ಕುಮಾರ್ ಅಭಿಪ್ರಾಯಪಟ್ಟರು.

 

ಗೃಹರಕ್ಷರಿಂದ ಶಿಸ್ತುಬದ್ಧ  ಜೀವನ

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದ.ಕ ಜಿಲ್ಲಾ ಪೊಲೀಸ್ ಹೆಚ್ಚುವರಿ ಅಧೀಕ್ಷಕ ರಾಜೇಂದ್ರ ಡಿ.ಎಸ್. ಮಾತನಾಡಿ, ಗೃಹರಕ್ಷಕ ದಳದವರು ಸೇವೆಗೆ ಮೊದಲ ಆದ್ಯತೆ ನೀಡುತ್ತಾರೆ. ಅವರ ಶಿಸ್ತು ಅವರ ಮನೆಯ ಮೇಲೆಯೂ ಪರಿಣಾಮ ಬೀರುತ್ತದೆ. ಅದರಿಂದ ಮನೆಯಲ್ಲಿಯೂ ಶಿಸ್ತುಬದ್ಧ ಜೀವನ ಸಾಧ್ಯವಾಗುತ್ತದೆ. ದ.ಕ ಜಿಲ್ಲೆಯಲ್ಲಿ ಗೃಹರಕ್ಷಕ ದಳದ ಸಂಖ್ಯಾಬಲ ಹೆಚ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಗೃಹರಕ್ಷಕರು ಸಾರ್ವಜನಿಕರನ್ನು ಪ್ರೇರೇಪಿಸಬೇಕು ಎಂದು ಹೇಳಿದರು.

Also Read  ಕಡಬ ತಾಲೂಕು ಪಂಚಾಯತ್ ಪ್ರಥಮ ಸಭೆ

ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕದಳ ದ.ಕ ಜಿಲ್ಲಾ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಮಾತನಾಡಿ, ದ.ಕ ಜಿಲ್ಲೆಯ ಗೃಹರಕ್ಷಕ ದಳವು ಜಿಲ್ಲಾಡಳಿತದ ಸೂಚನೆಗೆ ಅನುಗುಣವಾಗಿ ಎಲ್ಲ ಸಂದರ್ಭಗಳಲ್ಲಿಯೂ ಪ್ರಾಮಾಣಿಕ ಸೇವೆ ಒದಗಿಸಿದೆ. ಎಲ್ಲ ವರ್ಗದವರನ್ನು ಒಳಗೊಂಡಿರುವ ಗೃಹರಕ್ಷಕ ದಳ ರಾಜ್ಯದಲ್ಲೇ ಅತ್ಯಧಿಕ ಸಂಖ್ಯೆಯ ಪದವೀಧರರನ್ನು ಹೊಂದಿದ ದಳವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೇವಾ ಮನೋಭಾವನೆಯೊಂದಿಗೆ ಗೌರವದ ಅಭಿಲಾಷೆಯಲ್ಲಿ ಸೇವೆ ಸಲ್ಲಿಸುವ ಗೃಹರಕ್ಷಕರು ದೇಶದೊಳಗಿನ ಸೈನಿಕರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಹಿರಿಯ ಗೃಹರಕ್ಷಕರಾದ ಬೆಳ್ತಂಗಡಿ ಘಟಕದ ಚಾಕೋ, ಕಡಬ ಘಟಕದ ಉದಯ ಶಂಕರ ಭಟ್, ಉಪ್ಪಿನಂಗಡಿ ಘಟಕದ ಸುಖಿತಾ ಎ. ಶೆಟ್ಟಿ, ಉಳ್ಳಾಲ ಘಟಕದ ಖಾಲಿದ್ ಹಾಗೂ ವಿಜಯವಾಣಿ ಹಿರಿಯ ವರದಿಗಾರ ಹರೀಶ್ ಮೋಟುಕಾನ ಅವರನ್ನು ಸನ್ಮಾನಿಸಲಾಯಿತು. ಕರ್ತವ್ಯದ ವೇಳೆ ಮೃತಪಟ್ಟ ಇಬ್ಬರು ಗೃಹರಕ್ಷಕರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಗೃಹರಕ್ಷಕ ದಳದ ಪ್ಲಟೂನ್ ಕಮಾಂಡರ್ ಮಾರ್ಕ್ ಸೆರಾ ಸ್ವಾಗತಿಸಿದರು. ಗೃಹರಕ್ಷಕ ದಿನೇಶ್ ಉಪ್ಪಿನಂಗಡಿ ವಂದಿಸಿದರು. ಕಚೇರಿ ಅಧೀಕ್ಷಕಿ ಶ್ಯಾಮಲಾ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!
Scroll to Top