ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ರಥೋತ್ಸವ ವೈಭವ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ. 07. ಇತಿಹಾಸ ಪ್ರಸಿದ್ಧ ನಾಗಾರಾಧನಾ ಕ್ಷೇತ್ರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ಇಂದು ಬೆಳಗ್ಗೆ ಚಂಪಾಷಷ್ಠಿ ರಥೋತ್ಸವ ವೈಭವದಿಂದ ಜರುಗಿತು.

ಭಕ್ತರು ಸಡಗರ ಸಂಭ್ರಮದಿಂದ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ರಥಾರೂಢನಾದ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವರು ರಥಬೀದಿಯಲ್ಲಿ ಸಂಚರಿಸಿದ್ದನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಉಮಾಮಹೇಶ್ವರ ದೇವರು ಆಸೀನರಾದ ಚಿಕ್ಕ ರಥೋತ್ಸವ ನೆರವೇರಿದ ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು. ಶುಕ್ರವಾರ ರಾತ್ರಿ ಪಂಚಮಿ ರಥೋತ್ಸವ ನಡೆಯಿತು.

ಕುಕ್ಕೆ ಶ್ರೀಸುಬ್ರಹ್ಮಣ್ಯ ಕ್ಷೇತ್ರದ ಚಂಪಾಷಷ್ಠಿಯಲ್ಲಿ ಭಾಗವಹಿಸಲೆಂದು ಜಿಲ್ಲೆಯ ವಿವಿಧ ಕಡೆಗಳಿಂದ, ಹೊರ ಜಿಲ್ಲೆ, ಹೊರರಾಜ್ಯಗಳಿಂದ ಸಾಕಷ್ಟು ಭಕ್ತರು ಬಂದಿದ್ದಾರೆ. ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ರಥಬೀದಿ, ಸುಬ್ರಹ್ಮಣ್ಯ ಪೇಟೆ ಆಕರ್ಷಕ ವಿದ್ಯುತ್ ದೀಪಾಂಲಕೃತಗೊಂಡು ಸುಂದರವಾಗಿ ಕಂಗೊಳಿಸುತ್ತಿದೆ. ವಿವಿಧೆಡೆ ಅಳವಡಿಸಿರುವ ಪ್ರಭಾವಳಿಗಳು ಮತ್ತು ದೇವರ ಕಲಾಕೃತಿಗಳು ಜಾತ್ರೆಯ ವೈಭವವನ್ನು ಹೆಚ್ಚಿಸಿವೆ. ಬ್ರಹ್ಮರಥಕ್ಕೆ ಬಳಸಿರುವ ಬೆತ್ತದ ರಥವನ್ನು ಮಲೆಕುಡಿಯ ಜನಾಂಗದವರೇ ನಿರ್ಮಿಸುತ್ತಿದ್ದಾರೆ. ದೇವಾಲಯದಲ್ಲಿ ವಿವಿಧ ಸೇವೆ ಸಲ್ಲಿಸಿದವರಿಗೆ ಕೊಡುವ ಪ್ರಸಾದದಲ್ಲಿ ರಥದಲ್ಲಿ ಅಳವಡಿಸಿರುವ ಬೆತ್ತದ ತುಂಡನ್ನು ಪ್ರಸಾದ ರೂಪವಾಗಿ ನೀಡಲಾಗುತ್ತದೆ.

Also Read  ಶಾಸಕ ಖಾದರ್ ಕಾರು ಹಿಂಬಾಲಿಸಿದಾತನ ಬಂಧಿಸಿ ಬಿಡುಗಡೆ.!

 

error: Content is protected !!
Scroll to Top