(ನ್ಯೂಸ್ ಕಡಬ) newskadaba.com ಸವಣೂರು, ಮಾ.24. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಪೂರಕವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಕಾಣಿಯೂರು ಗ್ರಾಮದಲ್ಲಿ ಅತೀಹೆಚ್ಚು ರೂಪೇ ಕಾರ್ಡ್ ವಿತರಣೆ ಮಾಡಿ, ಅಂತರ್ಜಾಲ ಬ್ಯಾಂಕಿಂಗ್ , ಎಟಿಎಂ ವ್ಯವಹಾರ ಉತ್ತೇಜನ, ಗ್ರಾಮದ ಪ್ರತಿಯೊಬ್ಬರಿಗೂ ಉಳಿತಾಯ ಖಾತೆಗಳನ್ನು ಹೊಂದುವಂತೆ ಮಾಡಿ ಡಿಜಿಟಲ್ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಜನರಲ್ ಮೇನೆಜರ್ ಎಸ್.ಎಂ. ಗೋರ್ಬಲ್ ಹೇಳಿದರು.
ಅವರು ಕಾಣಿಯೂರು ಗ್ರಾ.ಪಂ. ಕಚೇರಿಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವತಿಯಿಂದ ಕಾಣಿಯೂರು ಗ್ರಾಮಕ್ಕೆ ‘ಡಿಜಿಟಲ್ ಗ್ರಾಮ’ ಪ್ರಮಾಣ ಪತ್ರ ನೀಡಿ ಮಾತನಾಡಿ ಗ್ರಾಮೀಣ ಬ್ಯಾಂಕುಗಳಲ್ಲಿ ತಮ್ಮ ಬ್ಯಾಂಕ್ ಮುಂಚೂಣಿಯಲ್ಲಿದ್ದು, ಸುಮಾರು 150 ಕೋಟಿ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದರು. ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕರಾದ ಎಸ್.ಜಿ. ಗಚ್ಚಿನ ಮಠ್ ಮಾತನಾಡಿ ಗ್ರಾಹಕರು ಅನಾಮಧೇಯ ಕರೆ ಬಂದಾಗ ಬ್ಯಾಂಕ್ ಖಾತೆಯ ಯಾವುದೇ ಮಾಹಿತಿ ನೀಡಬಾರದು. ಯಾವುದೇ ಬ್ಯಾಂಕ್ ಗ್ರಾಹಕರ ಖಾತೆಗಳ ವಿವರಗಳನ್ನು ಕೇಳುವುದಿಲ್ಲ. ದ.ಕ. ಜಿಲ್ಲೆಯಲ್ಲಿ ಒಟ್ಟು 4 ಗ್ರಾಮಗಳು ಮಾತ್ರ ಡಿಜಿಟಲ್ ಗ್ರಾಮವಾಗಿ ಆಯ್ಕೆಯಾಗಿದ್ದು, ಅದರಲ್ಲಿ ಕಾಣಿಯೂರು ಗ್ರಾಮ ಕೂಡಾ ಒಂದಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಸೀತಮ್ಮ ಖಂಡಿಗ, ಉಪಾಧ್ಯಕ್ಷೆ ಕಮಲಾಕ್ಷಿ ಬೆದ್ರಂಗಳ, ಪಿಡಿಓ ಕೀರ್ತಿಪ್ರಸಾದ್, ಕಾಣಿಯೂರು ಶಾಖಾ ಪ್ರಬಂಧಕ ರಘುಪ್ರಸಾದ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಗಣೇಶ್ ಉದುನಡ್ಕ, ಪದ್ಮನಾಭ ಅಂಬುಲ, ಸುರೇಶ್ ಓಡಬಾಯಿ, ಬೆಳಂದೂರು ಗ್ರಾ.ಪಂ.ಸದಸ್ಯ ಜಯಂತ ಅಬೀರ, ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ಉದ್ಯಮಿ ಪ್ರದೀಪ್ ಬೊಬ್ಬೆಕೇರಿ, ಜನಾರ್ದನ ಆಚಾರ್ಯ ಅಬೀರ, ವಿಶ್ವನಾಥ ಗಾಳಿಬೆಟ್ಟು, ಮಮತಾ ಗುಂಡಿಗದ್ದೆ, ರಾಜೇಶ್ ಮೀಜೆ,ವಸಂತ ಅಬೀರ, ತಿಮ್ಮಪ್ಪ ಬೀರುಕುಡಿಕೆ, ಪಾರ್ವತಿ ,ಚಿತ್ರಾ, ಬ್ಯಾಂಕ್ ಸಿಬ್ಬಂದಿ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.