(ನ್ಯೂಸ್ ಕಡಬ) newskadaba.com ಡಿ. 04 ಬೆಂಗಳೂರು: ಫೆಂಗಲ್ ಚಂಡಮಾರುತದ ಅಬ್ಬರದಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆಯಾಗಿದ್ದು, ಮುಂದಿನ ಒಂದೆರಡು ದಿನ ಕರಾವಳಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಫೆಂಗಲ್ ಚಂಡಮಾರುತ ತಮಿಳುನಾಡು, ರಾಜ್ಯದ ದಕ್ಷಿಣ ಒಳನಾಡಿನ ಮೂಲಕ ಇದೀಗ ಅರಬ್ಬಿ ಸಮುದ್ರ ಸೇರಿಕೊಂಡಿದೆ. ಚಂಡಮಾರುತದ ಪ್ರಭಾವ ಕಡಿಮೆಯಾಗಿದ್ದರೂ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಪ್ರಮಾಣದ ಮಳೆಯಾಗಿದೆ. ಒಟ್ಟಾರೆ ರಾಜ್ಯದಲ್ಲಿ ಡಿ.9ರ ವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ವರದಿ ಪ್ರಕಾರ, ದಕ್ಷಿಣ ಕನ್ನಡದ ಮುಲ್ಕಿಯಲ್ಲಿ ಅತೀ ಹೆಚ್ಚು 26 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಮಂಗಳೂರಿನಲ್ಲಿ 19, ಪಣಂಬೂರು 18, ಕಾರ್ಕಳ 15, ಉಡುಪಿ 14, ಕೋಟ 13, ಭಾಗಮಂಡಲ, ಮದ್ದೂರು ಹಾಗೂ ಬೆಳ್ಳೂರಿನಲ್ಲಿ ತಲಾ 9, ಹುಣಸೂರು, ನಾಪೋಕ್ಲು ತಲಾ 6, ಪುತ್ತೂರು, ಮಾಣಿ, ಸುಳ್ಯ, ಸರಗೂರು ಮಂಡ್ಯದಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ.