OTS ಗಡುವು ಅಂತ್ಯ: BBMPಯಿಂದ ದಾಖಲೆಯ 4,284 ಕೋಟಿ ರೂ.ತೆರಿಗೆ ಸಂಗ್ರಹ

(ನ್ಯೂಸ್ ಕಡಬ) newskadaba.com ಡಿ. 02. ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಬಾಕಿ ಪಾವತಿಗೆ ನೀಡಿದ್ದ ಒನ್ ಟೈಮ್ ಸೆಟ್ಲಮೆಂಟ್ ಅವಕಾಶ ಶನಿವಾರ (ನ.30)ಕ್ಕೆ ಕೊನೆಗೊಂಡಿದ್ದು, ಒಟಿಎಸ್ ಪರಿಣಾಮ ಬಿಬಿಎಂಪಿಗೆ ದಾಖಲೆಯ 4,284 ಕೋಟಿ ರೂ. ಆಸ್ತಿ ತೆರಿಗೆ ವಸೂಲಿಯಾಗಿದೆ. ಈ ಮೂಲಕ ಪಾಲಿಕೆಯೂ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

2022-23ರಲ್ಲಿ 2,300 ಕೋಟಿ ರೂಪಾಯಿ ಮತ್ತು 2023-24ರಲ್ಲಿ 2293.81 ಕೋಟಿ ರೂಪಾಯಿಗಳನ್ನು ಪಾಲಿಕೆ ಸಂಗ್ರಹಿಸಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಆಸ್ತಿ ತೆರಿಗೆ ವಸೂಲಿಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಒಟಿಎಸ್ ಯೋಜನೆ ಆಸ್ತಿ ತೆರಿಗೆ ಸಂಗ್ರಹ ಸುಧಾರಿಸಲು ಸಹಾಯ ಮಾಡಿದೆ. ಯೋಜನೆಯಡಿಯಲ್ಲಿ, ಆಸ್ತಿ ಮಾಲೀಕರನ್ನು ಚಕ್ರಬಡ್ಡಿ ಮತ್ತು ದಂಡಗಳಿಂದ ಹೊರಗಿಡಲಾಗಿತ್ತು. 9 ತಿಂಗಳ ಹಿಂದೆ ಆರಂಭಿಸಿದ್ದ ಯೋಜನೆಯನ್ನು ಎರಡು ಬಾರಿ ವಿಸ್ತರಿಸಲಾಗಿತ್ತು. ಯೋಜನೆಯು ನವೆಂಬರ್ 30 ರಂದು ಕೊನೆಗೊಂಡಿದ್ದು, ಯೋಜನೆಯನ್ನು ಬಳಸಿಕೊಳ್ಳದ ಬಾಕಿದಾರರು ದುಪ್ಪಟ್ಟು ಆಸ್ತಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ. 2024ರ ಬಜೆಟ್ ಮಂಡನೆ ವೇಳೆ ಬಿಬಿಎಂಪಿ 6,000 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ, ಒಟಿಎಸ್ ಯೋಜನೆ ಜಾರಿಯಾದ ಬಳಿಕ ಈ ಗುರಿಯನ್ನು 5,200 ಕೋಟಿ ರೂ.ಗೆ ಪರಿಷ್ಕರಿಸಲಾಗಿತ್ತು. ಮಾರ್ಚ್ 2025 ರ ಅಂತ್ಯದ ವೇಳೆಗೆ ನಿರೀಕ್ಷಿತ ಗುರಿಯನ್ನು ತಲುಪಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.

Also Read  ಕಡಬ: ಮರದಿಂದ ಬಿದ್ದು ವ್ಯಕ್ತಿ ಮೃತ್ಯು

 

error: Content is protected !!
Scroll to Top