ಕೊಲೆ ಕೇಸ್ ಕೈದಿಗೆ ಕೃಷಿ ಮಾಡಲು 3 ತಿಂಗಳು ಪೆರೋಲ್: ಕರ್ನಾಟಕ ಹೈಕೋರ್ಟ್ ಆದೇಶ

(ನ್ಯೂಸ್ ಕಡಬ) newskadaba.com ಡಿ. 02. ಬೆಂಗಳೂರು:  ಅನಾರೋಗ್ಯಪೀಡಿತ ತಾಯಿಗೆ ಚಿಕಿತ್ಸೆ ಕಲ್ಪಿಸಲು, ತಂದೆಯ ಯೋಗಕ್ಷೇಮ ವಿಚಾರಿಸಲು ಮತ್ತು ಸಂತಾನ ಪಡೆಯಲು ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಸಜಾ ಬಂಧಿಗೆ ನ್ಯಾಯಾಲಯ ಪೆರೋಲ್ ನೀಡಿದ ಉದಾಹರಣೆ ಸಾಕಷ್ಟಿವೆ. ಆದರೆ ಇದೀಗ ಕೃಷಿ ಚಟುವಟಿಕೆ ನೋಡಿಕೊಳ್ಳಲು 11 ವರ್ಷಗಳಿಂದ ಜೈಲಿನಲ್ಲಿರುವ ಸಜಾ ಕೈದಿಯೊಬ್ಬನಿಗೆ ಪೆರೋಲ್ ಮಂಜೂರು ಮಾಡಿ ಹೈಕೋರ್ಟ್ ಅಪರೂಪದ ಆದೇಶ ನೀಡಿದೆ.

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಿದ್ದಿದೇವರಹಳ್ಳಿ ನಿವಾಸಿ ಚಂದ್ರ (36) ಎಂಬಾತ, ತನ್ನ ತಂದೆ ಹೆಸರಿನಲ್ಲಿರುವ ಜಮೀನಿನಲ್ಲಿ ಕೃಷಿ ಚಟುವಟಿಕೆ ನೋಡಿಕೊಳ್ಳಲು ಪೆರೋಲ್ ನೀಡುವಂತೆ ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದ. ಆತನ ಮೊರೆ ಆಲಿಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರ ಪೀಠ, ಚಂದ್ರಗೆ 90 ದಿನಗಳ ಪೆರೋಲ್ ನೀಡಿ ಆದೇಶಿಸಿದೆ. ಆ ಮೂಲಕ ತಂದೆಯ ವೃತ್ತಿಯಲ್ಲಿ ತೊಡಗಿಕೊಳ್ಳಲು ಜೈಲು ಪಾಲಾಗಿರುವ ಮಗನಿಗೆ ಅವಕಾಶ ಕಲ್ಪಿಸಿದೆ. ಅರ್ಜಿದಾರ ಚಂದ್ರ 11 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಪೆರೋಲ್ ಮೇಲೆ ಯಾವತ್ತೂ ಬಿಡುಗಡೆಯಾಗಿಲ್ಲ. ಪ್ರಕರಣದ ಸತ್ಯಾಂಶ ಪರಿಶೀಲಿಸಿದರೆ ಪೆರೋಲ್ ಮೇಲೆ ಬಿಡುಗಡೆ ಯಾಗುವ ಅಗತ್ಯವನ್ನು ಅರ್ಜಿದಾರ ಮೇಲ್ನೋ ಟಕ್ಕೆ ಸಾಬೀತುಪಡಿಸಿದ್ದಾರೆ. ಆದ್ದರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು, ಆತನನ್ನು 90 ದಿನ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಇದೇ ವೇಳೆ ಚಂದ್ರಗೆ ಪೆರೋಲ್ ನೀಡಲು ನಿರಾಕರಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು 2023ರ ಸೆ.23ರಂದು ನೀಡಿದ್ದ ಹಿಂಬರಹವನ್ನು ರದ್ದುಪಡಿಸಿರುವ ಹೈಕೋರ್ಟ್, ಪೆರೋಲ್ ಅವಧಿಯಲ್ಲಿ ಚಂದ್ರ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಬಾರದು. ಆತ ಪೆರೋಲ್ ಮುಗಿಸಿ, ಕಾರಾಗೃಹಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಮುಖ್ಯ ಅಧೀಕ್ಷಕರು ಅಗತ್ಯ ಷರತ್ತು ವಿಧಿಸಬಹುದು. ಆ ಯಾವುದೇ ಷರತ್ತು ಉಲ್ಲಂಘಿಸಿದರೆ, ಪೆರೋಲ್ ಮಂಜೂರಾತಿ ಆದೇಶ ತನ್ನಿಂದ ತಾನೇ ರದ್ದಾಗುತ್ತದೆ. ಚಂದ್ರ ಪ್ರತಿ ವಾರದ ಮೊದಲ ದಿನದಂದು ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಬೇಕೆಂದು ನ್ಯಾಯಾಲಯ ಆದೇಶದಲ್ಲಿ ನಿರ್ದೇಶಿಸಿದೆ.

Also Read  ಅಕ್ಟೋಬರ್ 16ರ ವರೆಗೆ ಶಾಲಾ ದಾಖಲಾತಿ ವಿಸ್ತರಿಸಿ ಆದೇಶ

error: Content is protected !!
Scroll to Top