(ನ್ಯೂಸ್ ಕಡಬ) newskadaba.com ಕಲಬುರಗಿ, ನ. 30. ಸೊಸೆ ಹಾಕಿದ್ದ ವರದಕ್ಷಿಣೆ ಕಿರುಕುಳ ಕೇಸ್‌ನಲ್ಲಿ ಕಲಬುರಗಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 93 ವರ್ಷದ ಅಜ್ಜಿ ನಾಗಮ್ಮ ಗುರುವಾರ 90 ದಿನಗಳ ಪರೋಲ್ ಮೇಲೆ ಬಿಡುಗಡೆಯಾಗಿದ್ದಾರೆ. ಎದ್ದು ನಡೆಯಲು ಸಾಧ್ಯವಾಗದ ಅಜ್ಜಿಯನ್ನು ಕುಟುಂಬ ಸದಸ್ಯರು ಎತ್ತಿಕೊಂಡು ಕಾರ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ.
ನವೆಂಬರ್ 16 ರಂದು ಕಲಬುರಗಿ ಜೈಲಿಗೆ ಭೇಟಿ ನೀಡಿದ್ದ ಉಪಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು 93 ವರ್ಷದ ಅಜ್ಜಿ ನಾಗಮ್ಮ ಶಿಕ್ಷೆ ಅನುಭವಿಸುತ್ತಿರುವುದನ್ನು ನೋಡಿದ್ದರು. ಬಳಿಕ ಜೈಲಿನ ಅಧಿಕಾರಿಗಳಲ್ಲಿ ವಿಚಾರಿಸಿದಾಗ, ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ ಜೀವಾವಧಿ ಅಜ್ಜಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ ಅನ್ನೋದು ಗೊತ್ತಾಗಿತ್ತು. ಮಲಮೂತ್ರಕ್ಕೂ ಎದ್ದು ಹೋಗದ ಸ್ಥಿತಿಯಲ್ಲಿರುವ ನಾಗಮ್ಮಳನ್ನು ಜೈಲು ಸಿಬ್ಬಂದಿಗಳು ಖೈದಿಗಳಂತೆ ಕಾಣದೇ ಮಾತೃ ವಾತ್ಸಲ್ಯದಿಂದ ಆರೈಕೆ ಮಾಡುತ್ತಿರುವುದನ್ನು ನೋಡಿದ್ದ ಅವರು, ಈಕೆಯ ಶಿಕ್ಷೆ ರದ್ದತಿಯ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸೂಚಿಸಿದ್ದರು. ಆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲವಾದರೂ ಪೆರೋಲ್ ಮೇಲೆ ಅಜ್ಜಿಯನ್ನು ಜೈಲು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.