(ನ್ಯೂಸ್ ಕಡಬ) newskadaba.com ತಮಿಳುನಾಡು, ನ. 30. ಶಬರಿಮಲೆ ಯಾತ್ರೆ ಋತು ಆರಂಭವಾಗಿದ್ದು, ವಿವಿಧ ರಾಜ್ಯಗಳಿಂದ ಭಕ್ತರು ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಅಧಿಕ ಸಂಖ್ಯೆಯಲ್ಲಿ ಭಕ್ತರ ಆಗಮನ ನಿರೀಕ್ಷೆ ಇರುವುದರಿಂದ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಇದೀಗ ರೈಲಿನಲ್ಲಿ ಶಬರಿಮಲೆಗೆ ತೆರಳುವ ಭಕ್ತರಿಗೆ ದಕ್ಷಿಣ ರೈಲ್ವೆ ಚೆನ್ನೈ ವಿಭಾಗ ಸೂಚನೆಯೊಂದನ್ನು ರವಾನಿಸಿದೆ. ನಿಯಮ ಮೀರಿದರೆ ದಂಡ ಅಥವಾ ಜೈಲು ಶಿಕ್ಷೆಯ ಎಚ್ಚರಿಕೆಯನ್ನೂ ನೀಡಿದೆ.
ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗವು ಶಬರಿಮಲೆ ಯಾತ್ರೆ ಸಂದರ್ಭದಲ್ಲಿ ಭಕ್ತರು ರೈಲಿನಲ್ಲಿ ಹಾಗೂ ರೈಲು ನಿಲ್ದಾಣದಲ್ಲಿ ಕರ್ಪೂರ ಬೆಳಗುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕೆಲ ಭಕ್ತರು ತಮ್ಮ ಪ್ರಯಾಣದ ಅವಧಿಯಲ್ಲಿ ಕರ್ಪೂರ ಬೆಳಗುತ್ತಾರೆ. ಇದರಿಂದ ಬೆಂಕಿ ಅವಘಡ ಸಂಭವಿಸುವ ಅಪಾಯ ಇರುತ್ತದೆ. ಹೀಗಾಗಿ ರೈಲ್ವೆ ಪ್ರಯಾಣಿಕರ ಹಾಗೂ ರೈಲ್ವೆ ಆಸ್ತಿಗಳ ಸುರಕ್ಷತೆ ದೃಷ್ಟಿಯಿಂದ ಕರ್ಪೂರ ಬೆಳಗದಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದೇವೆ. ಕರ್ಪೂರ ಅಥವಾ ಇತರೆ ಯಾವುದೇ ಬೆಂಕಿ ಹಚ್ಚುವ ಚಟುವಟಿಕೆ ಮಾಡಬಾರದು ಎಂದು ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.